ಮಂಗಳೂರು, ಮೇ 11: ಸಚಿವ ರಮಾನಾಥ್ ರೈ ಆಪ್ತ ಸಂಜೀವ್ ಪೂಜಾರಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್ಪಿ ಜನತೆಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಚುನಾವಣೆಯ ಕಾವು ರಂಗೇರುತ್ತಿದ್ದಂತೆ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಪಕ್ಷಗಳ ನಡುವೆ ಅಹಿತಕರ ಘಟನೆ ನಡೆದಿತ್ತು. ಈ ಹಿನ್ನೆಲೆ ದಕ್ಷಿಣ ಕನ್ನಡ ಎಸ್ಪಿ ರವಿಕಾಂತೇಗೌಡ ಎಲ್ಲ ಪಕ್ಷದವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ನೀವು ಕಾನೂನು ಕೈಗೆ ತೆಗೆದುಕೊಂಡರೆ ನಾವು ಸುಮ್ಮನೆ ಕೂರುವುದಿಲ್ಲ. ಏನೇ ದೂರುಗಳಿದ್ದರೂ ಚುನಾವಣಾಧಿಕಾರಿ ಅಥವಾ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿ. ತಮ್ಮ ಪಕ್ಷದ ಪ್ರಚಾರಕ್ಕಾಗಿ ನೀವೇ ಕಾರ್ಯಾಚಣೆಗೆ ಇಳಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ವತಃ ಪಕ್ಷದ ಕಾರ್ಯಕರ್ತರೇ ಇಳಿದು ಕಾರ್ಯಾಚರಣೆ ಮಾಡಿದರೆ ಅದು ಅಪರಾಧದ ಹಂತ ತಲುಪುತ್ತದೆ. ಏನೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬೇಡಿ. ಶಾಂತಿ ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.