ಉಡುಪಿ, ಸೆ 22(Daijiworld News/PY): ಅದಮಾರು ಮಠದ ಪರವಾಗಿ, ಜ್ವರ ನಿರೋಧಕ ನಿರೋಧಕ ಕಷಾಯ ಹಾಗೂ ಆಹಾರವನ್ನು ವಿತರಿಸಲಾಯಿತು.









ಸೆಪ್ಟೆಂಬರ್ 20ರಂದು ಸಂಭವಿಸಿದ ಭಾರೀ ಮಳೆಯ ಪ್ರಭಾವದಿಂದಾಗಿ ಶ್ರೀಕೃಷ್ಣ ಮಠದ ಸುತ್ತಲಿನ ನೆರೆಪ್ರದೇಶಗಳಾದ ಕಲ್ಸಂಕ, ಪಾರ್ಕಿಂಗ್ ಏರಿಯಾ ಮತ್ತು ಬೈಲಕೆರೆಗಳಲ್ಲಿ ಪರ್ಯಾಯ ಶ್ರೀ ಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಶ್ರೀಮಠದ ವ್ಯವಸ್ಥಾಪಕ ಶ್ರೀ ಗೋವಿಂದರಾಜ್ ಮತ್ತು ಸ್ಥಳೀಯ ಉದ್ಯಮಿ ಶ್ರೀ ಹರೀಶ್ ಬೈಲಕೆರೆಯವರೊಂದಿಗೆ ಮನೆ-ಮನೆಗೆ ತೆರಳಿ, ಅವರ ಯೋಗಕ್ಷೇಮ ವಿಚಾರಿಸಿ, ಬೆಳಗ್ಗಿನ ಫಲಾಹಾರದ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಮಧ್ಯಾಹ್ನ 11.00 ಗಂಟೆಗೆ ಎಲ್ಲಾ ಮನೆಗಳಿಗೆ ಜ್ವರ ನಿರೋಧಕ ಕಷಾಯವನ್ನು ವಿತರಿಸಲಾಯಿತು.
ಶ್ರೀಕೃಷ್ಣಮಠದ ಆಸುಪಾಸಿನ ಸುಮಾರು 80 ಕುಟುಂಬಗಳ 400 ಜನರಿಗೆ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯದಂತೆ ಶ್ರೀಕೃಷ್ಣ ಮಠದಿಂದ ಅನ್ನಪ್ರಸಾದ ವಿತರಿಸಲಾಯಿತು. ಪ್ರಸಾದ ರೂಪದಲ್ಲಿ ಅನ್ನ, ಸಾರು, ಕುಂಬಳಕಾಯಿ ಸಾಂಬಾರು ಮತ್ತು ಪಾಯಸ ಶ್ರೀಮಠದ ವಾಹನದಲ್ಲಿ ಮನೆ-ಮನೆಗೆ ವಿತರಿಸಲಾಯಿತು.
ವಿತರಣಾ ಸಂದರ್ಭದಲ್ಲಿ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮತ್ತು ಮಾನ್ಯ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಮತ್ತು ನಗರಸಭಾ ಆಯುಕ್ತರು ಕಂದಾಯ ಸಹಾಯಕ ಆಯುಕ್ತರು ಪೊಲೀಸ್ ವರಿಷ್ಠಾಧಿಕಾರಿಗಳು ನಗರಸಭಾ ಸದಸ್ಯರು ಮತ್ತು ನೇತೃತ್ವ ವಹಿಸಿದ ಸ್ಥಳೀಯರಾದ ಹರೀಶ್ ಬೈಲಕೆರೆ, ಶ್ರೀಮಠದ ವ್ಯವಸ್ಥಾಪಕರು ಮುತ್ತು ಶ್ರೀ ಕೃಷ್ಣ ಸೇವಾ ಬಳಗದ ವೈ.ಎನ್.ಆರ್.ರಾವ್ ಮುಂತಾದವರು ಉಪಸ್ಥಿತರಿದ್ದರು.
ಸಮಾಜದ ಒಳಿತಿಗಾಗಿ ನಿನ್ನೆ ಸಂಜೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಈಶಪ್ರಿಯ ತೀರ್ಥ ಶ್ರೀಪಾದರು ರಾತ್ರಿ ಪೂಜೆಯ ನಂತರ ಶ್ರೀಮಠದ ಋತ್ವಿಜರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.