ಮಂಗಳೂರು, ಸೆ. 22 (DaijiworldNews/MB) : ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಪ್ರಾದೇಶಿಕ ಉಪಭಾಷೆಯಾದ ಅರೆಭಾಷೆಯಲ್ಲಿ ಇದೇ ಮೊದಲ ಬಾರಿಗೆ ಛಂದೋಬದ್ಧ ಯಕ್ಷಗಾನ ಪ್ರಸಂಗ ರಚನೆಗೊಂಡಿದ್ದು, ತಾಳಮದ್ದಳೆಯ ಮೊದಲ ಪ್ರಯೋಗ ಯಶಸ್ವಿಯಾಗಿದೆ.


ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವಿನಂತಿಯಂತೆ ಯಕ್ಷಗಾನ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಅರೆಭಾಷೆಯಲ್ಲಿ ಯಕ್ಷಗಾನ, ತಾಳಮದ್ದಳೆ ಪ್ರಯೋಗ ಈಗಾಗಲೇ ನಡೆದಿದೆ. ಆದರೆ, ಪ್ರಸಂಗ ಸಾಹಿತ್ಯ ಕನ್ನಡದಲ್ಲಿದ್ದು ಅರೆಭಾಷೆಯಲ್ಲೇ ಪ್ರಸಂಗ ಸಾಹಿತ್ಯವೂ ದೊರೆಯಬೇಕು ಎಂಬ ಅಕಾಡೆಮಿಯ ಯೋಜನೆಯಂತೆ ಭವ್ಯಶ್ರೀ ಅವರು ಕನ್ನಡದಿಂದ ಐದು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸುತ್ತಿದ್ದಾರೆ. ಈಗಾಗಲೇ ಶರಸೇತು ಬಂಧನ ಮತ್ತು ಪಂಚವಟಿ ಪ್ರಸಂಗದ ಅನುವಾದ ಪೂರ್ಣಗೊಂಡಿದೆ. ಈ ಪೈಕಿ ಶರಸೇತು ಬಂಧನ ಪ್ರಸಂಗ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆ ವಿಡಿಯೊ, ಆಡಿಯೊ ರೆಕಾರ್ಡಿಂಗ್ ನಡೆದಿದೆ.
ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಿರುವ ಯಕ್ಷಗಾನ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು, ನನ್ನ ಮೊದಲ ಗುರುಗಳಾದ ವಿಶ್ವವಿನೋದ ಬನಾರಿ ಅವರು ಅರೆಭಾಷೆಯಲ್ಲಿ ಪದ್ಯ ರಚನೆಗೆ ಪ್ರೋತ್ಸಾಹಿಸಿದ್ದು ಗುರುಗಳಾದ ಗಣೇಶ ಕೊಲೆಕಾಡಿ ಅವರು ಛಂದಸ್ಸಿನ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಭಾಗವತರಾದ ಸುಬ್ರಾಯ ಸಂಪಾಜೆ ಭಾಷೆ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸರ್ವ ಸದಸ್ಯರು, ಜಬ್ಬಾರ್ ಸಮೊ ಅವರು ಪ್ರೋತ್ಸಾಹ ನೀಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಪ್ರಸಂಗ ಅನುವಾದ ಆರಂಭಿಸಿದ್ದು ಹೊಸ ಪ್ರಯೋಗಕ್ಕೆ ಇಳಿದಿರುವುದು ಸಂತಸ ನೀಡಿದೆ ಎಂದು ಹೇಳಿದ್ದಾರೆ.