ಮಂಗಳೂರು, ಮೇ 11: ಈ ಬಾರಿಯ ಕರಾವಳಿ ಚುನಾವಣೆ ಈಗಾಗಲೇ ಭಾರೀ ಕುತೂಹಲ ಕೆರಳಿಸಿದ್ದು, ಇಡೀ ರಾಜ್ಯದ ಚಿತ್ತ ಕರಾವಳಿಯತ್ತ ಹೊರಳುವಂತೆ ಮಾಡಿದೆ.
ಸದ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಈಗಾಗಲೇ ಕಟ್ಟೆಚ್ಚರ ವಹಿಸಿದ್ದು, 1,858 ಮತಗಟ್ಟೆಗಳಿಗೆ ಒಟ್ಟು 13,176 ಸಿಬಂದಿಗಳನ್ನು ನೇಮಕ ಮಾಡಲಾಗಿದೆ. ಈ ಚುನಾವಣೆಗೆ 2,196 ಅಧಿಕಾರಿಗಳು, 8,784 ಮತಗಟ್ಟೆ ಅಧಿಕಾರಿಗಳು ಮತ್ತು 2,196 ಡಿ ದರ್ಜೆ ನೌಕರರನ್ನು ಮತಗಟ್ಟೆ ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
ಈಗಾಗಲೇ ಜಿಲ್ಲೆಯ ಅಯಾಯ ಮತಗಟ್ಟೆಗಳಿಗೆ ಸಿಬ್ಬಂದಿಗಳು ತೆರಳಿದ್ದು, ಜೊತೆಗೆ ಮತಯಂತ್ರಗಳನ್ನು ಆಯಾಯ ಮತಗಟ್ಟೆಗಳಿಗೆ ರವಾನೆ ಮಾಡಲಾಗುತ್ತಿದೆ. ಅದರಲ್ಲಿ 2699 ಬ್ಯಾಲೆಟ್ ಯೂನಿಟ್, 2,262 ಕಂಟ್ರೋಲ್ ಯೂನಿಟ್ ಮತ್ತು 2,608 ವಿವಿ ಪ್ಯಾಟ್ ಯಂತ್ರಗಳನ್ನು ಈಗಾಗಲೇ ರವಾನಿಸಲಾಗಿದೆ. ಮಾತ್ರವಲ್ಲ, ಶೇ 30-40 ಮತ ಯಂತ್ರಗಳು ಹೆಚ್ಚುವರಿಯಾಗಿ ಲಭ್ಯವಿದ್ದು, ಚುನಾವಣಾ ಉದ್ದೇಶಕ್ಕಾಗಿ ಈಗಾಗಲೇ 335 ಬಸ್ಸುಗಳು, 163 ವ್ಯಾನ್ ಮತ್ತು 150 ಜೀಪುಗಳು ಸೇರಿದಂತೆ 648 ವಾಹನಗಳನ್ನು ಚುನಾವಣಾ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಶೌಚಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆ ಸಿಬ್ಬಂದಿಗಳಿಗೆ ಅಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಷ್ಟೇ ಅಲ್ಲದೆ, ಅರೆ ಪಡೆಯ ಸೇನಾ ಸಿಬ್ಬಂದಿಗಳು ಸಜ್ಜುಗೊಂಡಿದ್ದಾರೆ. ಕೆಲ ಮತಗಟ್ಟೆಗಳಿಗೆ ಸ್ಥಳೀಯ ಪೊಲೀಸ್ ಪಡೆಯನ್ನು ನಿಯೋಗಿಸಲಾಗಿದೆ. ಅರೆ ಸೇನಾ ಪಡೆಯ 150 ಸಿಬ್ಬಂದಿಗಳನ್ನು ತುರ್ತು ಬಳಕೆಗಾಗಿ, ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಗಸ್ತು ತಂಡ ಈಗಾಗಲೇ ಆಯಾಯ ಪ್ರದೇಶಗಳಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಉನ್ನತ ಅಧಿಕಾರಿಗಳು ಮತಗಟ್ಟೆಗಳ ಭದ್ರತೆಯಲ್ಲಿ ತಲ್ಲೀನರಾಗಿದ್ದಾರೆ.