ಮಂಗಳೂರು, ಸೆ 22(Daijiworld News/PY): ಜಿಲ್ಲೆಯಲ್ಲಿ ನೈರುತ್ಯ ಮಾರುತ ಮಳೆ ನಿರಂತರವಾಗಿ ಸುರಿಯುತ್ತಿದೆ. ಆದರೆ, ಮಳೆಯ ತೀವ್ರತೆ ಮಾತ್ರ ಕಡಿಮೆಯಾಗಿದೆ.

ಬೆಳ್ತಂಗಡಿ ಸೇರಿದಂತೆ ಕಡಬ ಹಾಗೂ ಸುಳ್ಯ ತಾಲೂಕಿನಲ್ಲಿ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು ಹಾಗೂ ವಿಟ್ಲದಲ್ಲಿ ಮಳೆ ಮುಂದುವರೆದಿದೆ.
ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಈ ನಡುವೆ ಭಾರಿ ಮಳೆಯಾಗುತ್ತಿದೆ. ಮುಂಜಾನೆ ವೇಳೆ ಸ್ವಲ್ಪ ಹಾಗೂ ಸಾಧಾರಣ ಮಳೆಯಾಗಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಫಾಲ್ಗುಣಿ, ನಂದಿನಿ ಹಾಗೂ ಶಾಂಭವಿ ನದಿಗಳ ಪ್ರವಾಹ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಪ್ರವಾಹಕ್ಕೆ ಸಿಲುಕಿ ಆಶ್ರಯ ಕೇಂದ್ರದಲ್ಲಿದ್ದ ಜನರು ತಮ್ಮ ಮನೆಗೆಳಿಗೆ ವಾಪಾಸ್ಸಾಗಿದ್ದಾರೆ. ಈ ಮಳೆಯಲ್ಲಿ ಸುಮಾರು 199.2 ಹೆಕ್ಟೇರ್ ಕೃಷಿ ಭೂಮಿ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.