ಕಾಪು, ಸೆ. 22 (DaijiworldNews/MB) : ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿದ್ದು ಕಾಂಗ್ರೆಸ್ ಪಕ್ಷದ ತತ್ವಗಳು ಮತ್ತು ನೀತಿಗಳ ಪ್ರಕಾರ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಲು ಬಲಪಡಿಸಲು ಸಲಹೆ ನೀಡಲಾಗಿದೆ.
ಮಾಧ್ಯಮಗಳಲ್ಲಿ ನಮ್ಮ ವಿಚಾರ ಮತ್ತು ದೃಷ್ಟಿಕೋನ ಪರಿಣಾಮಕಾರಿಯಾಗಿ ಬಿಂಬಿತವಾಗಬೇಕಾಗಿರುವುದು ಅಗತ್ಯವಾಗಿದೆ. ಹೀಗಾಗಿ, ಅವರಿಗೆ ಇರುವ ಅನುಭವ ಮತ್ತು ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯ ಗಮನಿಸಿ ವಕ್ತಾರರನ್ನಾಗಿ ಸೊರಕೆ ಅವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿನಯ್ ಕುಮಾರ್ ಸೊರಕೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದು ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿದ್ದರು. ಅವರು ಸಚಿವರಾಗಿ, ಉಡುಪಿಯಿಂದ ಸಂಸತ್ ಸದಸ್ಯರಾಗಿ, ಕಾಪು ಮತ್ತು ಪುತ್ತೂರಿನಿಂದ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.