ಸುಪ್ರೀತಾ ಸಾಲ್ಯಾನ್, ಪಡು
ಸತೀಶ್ ಬಂದಲೆ.. ಈ ಹೆಸರು ಕೇಳಿದಾಕ್ಷಣ ಕರಾವಳಿಗರಿಗೆ ನೆನಪಾಗುವ ಚಿತ್ರ ಎಕ್ಕಸಕ. ಈ ತುಳು ಚಲನ ಚಿತ್ರದ ಹೆಸರು ಚಿಕ್ಕ ಮಕ್ಕಳ ಬಾಯಲ್ಲೂ ಹರಿದಾಡುತಿದೆಯೆಂದರೆ ಅದಕ್ಕೆ ಕಾರಣ ಈ ಹಾಸ್ಯ ಕಲಾವಿದ. ಕಲಾ ಜೀವನಕ್ಕೆ ಬದುಕನ್ನೇ ಮುಡಿಪಾಗಿರಿಸಿಕೊಂಡ ಅನೇಕ ಕಲಾವಿದರು ನಮ್ಮ ನಡುವೆ ಇದ್ದಾರೆ. ಅಂತಹ ಅಪ್ರತಿಮ ಕಲಾವಿದರಲ್ಲಿ ಇವರೂ ಒಬ್ಬರು. ಕಲಾ ಮಾತೆ ಕೈ ಹಿಡಿದರೆ ಎಲ್ಲಿಂದ ಎಲ್ಲಿಗೂ ಸಾಗಬಹುದು ಎಂಬುದಕ್ಕೆ ನಿದರ್ಶನ ಸತೀಶ್ ಬಂದಲೆ.
ಇವರು ಹುಟ್ಟು ಕಲಾವಿದ. ಚಿಕ್ಕಂದಿನಿಂದಲೇ ಕಲಾ ಕ್ಷೇತ್ರದಲ್ಲಿ ಅವರಿಗೆ ಅಪಾರ ಆಸಕ್ತಿ. ನಿರರ್ಗಳವಾಗಿ ಮಾತನಾಡುವ ವಾಕ್ ಚಾತುರ್ಯ ಅವರದು. ತಮ್ಮ ಹಾಸ್ಯ ಪ್ರಕಾರದಿಂದ ವೇದಿಕೆಗೆ ಎಂಟ್ರಿ ಕೊಟ್ಟರೆ ಕಲಾಭಿಮಾನಿಗಳಲ್ಲಿ ನಾನ್ ಸ್ಟಾಪ್ ನಗು. ಮಂಗಳೂರಿನ ಪಚ್ಚನಾಡಿ ಸಮೀಪದ ಮಾರಪ್ಪ ಮತ್ತು ರೋಹಿಣಿ ದಂಪತಿಯ ಪುತ್ರನಾದ ಇವರು ಕಲಿತದ್ದು ಕೇವಲ ಹತ್ತನೇ ಕ್ಲಾಸು.
ಅತುಲ ಕಲಾಪ್ರಿಯರಾಗಿದ್ದ ತಂದೆ ತಾಯಿಯ ಪ್ರೇರಣೆಯಿಂದ ರಂಗಭೂಮಿ ಪ್ರವೇಶಿಸಿದ ಇವರದು ನಾಟಕ ಕ್ಷೇತ್ರದಲ್ಲಿ ಎತ್ತಿದ ಕೈ. ಯಾವುದೇ ನಟನೆಯನ್ನು ಸಲೀಸಾಗಿ ನಿರ್ವಹಿಸಬಲ್ಲ ಇವರು ಸ್ತ್ರೀ ವೇಷದಲ್ಲಿ ಹಾಸ್ಯ ಪಾತ್ರಧಾರಿಯಾಗಿ ಹೆಚ್ಚಾಗಿ ಮಿಂಚಿದವರು. ಮಾಧವ ಜಪ್ಪು ಪಟ್ನ ಅವರ ಸೀತೆ ಬರ್ಪಲ್ ಎಂಬ ನಾಟಕದ ಮೂಲಕ ಬಣ್ಣ ಹಚ್ಚಿದ ಇವರು ಮೊದಲ ವೇಷದಲ್ಲೇ ಕಲಾಭಿಮಾನಿಗಳ ಮನ ಗೆದ್ದಿರುವ ಚತುರ.
ಹೆಸರಾಂತ ಕಲಾವಿದ ದೇವದಾಸ್ ಕಾಪಿಕಾಡ್ ಅವರ ಶಿಷ್ಯನಾಗಿ ರಂಗಭೂಮಿಯಲ್ಲಿ ಮುಂದುವರಿದ ಇವರಿಗೆ ಅವಕಾಶಗಳ ಮಹಾಪೂರವೇ ಹರಿದು ಬಂತು. ಸುಮಾರು 75 ಕ್ಕೂ ಮಿಕ್ಕಿ ನಾಟಕಗಳಲ್ಲಿ ನಟಿಸಿರುವ ಇವರಿಗೆ ವೈವಾಟ್ ವಸಂತೆ, ತೆಲಿಕೆದ ಬರ್ಸೊಲು, ಬದುಕುನ ಸಾದಿ ಮುಂತಾದ ನಾಟಕಗಳು ಹೆಸರು ತಂದು ಕೊಟ್ಟಿವೆ. ನಾಟಕ ರಂಗದಲ್ಲಿ ಸುಮಾರು 10,000 ಕ್ಕೂ ಮಿಕ್ಕಿ ಪ್ರದರ್ಶನ ಮಾಡಿರುವ ಇವರು ಕರ್ನಾಟಕದ ಅನೇಕ ಭಾಗದ ದರ್ಶನದ ಜೊತೆಗೆ ದುಬೈ, ಕತಾರ್, ಕುವೈಟ್, ಬಹ್ರೈನ್ ಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಪ್ರಶಂಸೆ ಪಡೆದುಕೊಂಡಿದ್ದಾರೆ.
ನಟನೆಗೆ ಜೀವ ತುಂಬುವುದು ಸುಲಭ ಸಾಧ್ಯವಲ್ಲ. ಕಲಾಮಾತೆ ಸರಸ್ವತಿಯ ತವರಾದ ಶೃಂಗೇರಿಯಲ್ಲಿ ನಾಟಕ ಪ್ರದರ್ಶಿಸುವ ಸಮಯ ಸತೀಶ್ ಅವರ ತಾಯಿ ಕಾಲದ ಹಸ್ತಕ್ಕೆ ಸಿಲುಕಿ ಮರೆಯಾದರು. ಆದರೂ ಕಲೆಯ ಮೇಲಿನ ಗೌರವದಿಂದ ಅ ನೋವನ್ನು ನುಂಗಿಕೊಂಡು, ಕಣ್ಣಂಚಿನ ನೀರನ್ನು ಮರೆಯಾಗಿಸಿ ಪ್ರೇಕ್ಷಕರನ್ನು ನಗಿಸಿದ ಧೀಮಂತ ಕಲಾವಿದ.
ನಾಟಕದ ಜೊತೆಗೆ ಯಕ್ಷಗಾನದ ಹವ್ಯಾಸವನ್ನು ಇಟ್ಟುಕೊಂಡಿರುವ ಇವರು ಯಕ್ಷರಂಗದಲ್ಲೂ ಮಿಂಚಿದ್ದಾರೆ. ಗುರುಗಳಾದ ಜಗದೀಶ್ ಉಚ್ಚಿಲ ಇವರಿಂದ ದೀಕ್ಷೆ ಪಡೆದ ಇವರು ಮೊದಲು ವೇಷ ತೊಟ್ಟದ್ದು ಕೃಷ್ಣಲೀಲೆ ಎಂಬ ಯಕ್ಷಗಾನಕ್ಕೆ. ಸುಮಾರು 6 ಪ್ರಸಂಗಗಳಲ್ಲಿ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಇವರು ಹಾಸ್ಯ ವೇಷಧಾರಿಯಾಗಿ ಯಕ್ಷರಂಗದಲ್ಲಿಯೂ ಮಿಂಚಿದ್ದಾರೆ.
ಸತೀಶ್ ಬಂದಲೆ ಸಿನಿಮಾ ಕ್ಷೇತ್ರದ ಮೂಲಕವೂ ಕಲಾರಸಿಕರಿಗೆ ಪರಿಚಿತರು. ಸಾಯಿ ಕೃಷ್ಣ ನಿರ್ದೇಶನದ ಜೋಕುಲಾಟಿಗೆ ಕಿರು ಚಿತ್ರದ ಮೂಲಕ ಸಿನಿ ರಂಗಕ್ಕೆ ಪ್ರವೇಶಿಸಿದ ಇವರು ಕನ್ನಡದ ಚೆಲ್ಲಾಪಿಲ್ಲಿ ಚಿತ್ರದಲ್ಲಿ ನಾಯಕ ವಿಜಯ ರಾಘವೇಂದ್ರ ಜೊತೆ ಅಭಿನಯಿಸಿದ್ದಾರೆ. ಎಕ್ಕಸಕ ತುಳುಚಿತ್ರದಲ್ಲಿ 12 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರ ನಟನೆ ಪ್ರೇಕ್ಷಕರ ಮನ ಗೆದ್ದಿದೆ. ರಂಗ್, ಚಾಲಿಪೋಲಿಲು, ಚಂಡಿಕೋರಿ ಮುಂತಾದ 10 ಕ್ಕೂ ಮಿಕ್ಕಿ ಚಿತ್ರದಲ್ಲಿ ನಟಿಸಿರುವ ಇವರು ರಂಗಭೂಮಿಯಲ್ಲಿ ಬಹು ಬೇಡಿಕೆಯ ಕಲಾವಿದ.
ಬರೋಬ್ಬರಿ 35 ವರ್ಷದಿಂದ ರಂಗಭೂಮಿಯಲ್ಲಿ ದುಡಿಯುತ್ತಿರುವ ಇವರು ಕಲಾರಾಧನೆಯ ಜೊತೆಗೆ ಮಾನವೀಯ ಅಂಶಗಳತ್ತ ಹೆಚ್ಚಿನ ಗಮನ ಹರಿಸುತ್ತಾರೆ. ತಮ್ಮ ಕಲಾಪ್ರಯಣದಲ್ಲಿ ಅನೇಕ ಪುರಸ್ಕಾರ ಪಡೆದಿರುವ ಇವರ ರಂಗಕಲೆಯ ಸಂತೃಪ್ತಿಯ ಹಿಂದೆ ಪತ್ನಿ ಗೀತಾ ಅವರ ಪ್ರೋತ್ಸಾಹವೂ ಇದೆ.