ಮಂಗಳೂರು, ಮೇ 11: ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಬ್ಬಕ್ಕೆ ಕೆಲ ಮತ ಕೇಂದ್ರಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಆಕರ್ಷಕಗೊಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಾರಿಯ ಚುನಾವಣೆಯನ್ನು ವಿಧಾನಸಭೆ ಚುನಾವಣೆಯ ಮತದಾನ ಹಬ್ಬವಾಗಿ ಆಚರಿಸಲು ತೀರ್ಮಾನಿಸಿದ್ದು, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯನ್ನು ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ. ಮಾತ್ರವಲ್ಲ, ವಿಧಾನಸಭಾ ಚುನವಣೆಯನ್ನು ಹಬ್ಬದಂತೆ ಆಚರಿಸಲು ಜನತೆಗೂ ಕರೆ ಕೊಟ್ಟಿದ್ದು, ಅದರಂತೆ ಕರಾವಳಿಯಲ್ಲಿ ಮತ ಕೇಂದ್ರಗಳನ್ನು ಬಹಳ ಆಕರ್ಷಕವಾಗಿ ಸಿಂಗರಿಸಲಾಗಿದೆ. ಜೊತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದ ಮತಗಟ್ಟೆಗಳಿಗೆ ತುಳು ಸಂಸ್ಕೃತಿಯ ಲೇಪ ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಚುನಾವಣಾ ಆಯೋಗ, ಮತ ಕೇಂದ್ರದಲ್ಲಿ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸ್ವಾಗತ ದ್ವಾರ ನಿರ್ಮಿಸಿದೆ. ಕೆಲ ಮತ ಕೇಂದ್ರಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಆಕರ್ಷಕಗೊಳಿಸಲಾಗಿದೆ. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ನಡೆಯಲಿರುವ ಮಹಾ ಮತದಾನ ಉತ್ಸವಕ್ಕೆ ಜಿಲ್ಲಾಡಳಿತ ಸಿದ್ದತೆ ಪೂರ್ಣಗೊಳಿಸಿದೆ.