ಮಂಗಳೂರು, ಸೆ 22(Daijiworld News/PY): ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಸೆ.22ರ ಮಂಗಳವಾರದಂದು ಕಾವೂರಿನ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದ್ದು, ವಿದ್ಯುತ್ ಬಿಲ್ ಪಾವತಿಸಲು ಬಳಕೆದಾರರಿಗೆ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.


ಪ್ರಸ್ತುತ ಜನಸಾಮಾನ್ಯರು ಕೊರೊನಾ, ಮಳೆ, ಪ್ರವಾಹ ಇನ್ನಿತರ ಸಮಸ್ಯೆಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಈ ಕಾರಣದಿಂದ ಹಲವಾರು ಕುಟುಂಬಗಳು ಅತಂತ್ರದಲ್ಲಿವೆ. ಕೊರೊನಾವು ಜಾಗತಿಕ ವಿಕೋಪವಾಗಿದ್ದು, ಅದರ ಪ್ರಕಾರ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ಹಾಗೂ ಸೂಕ್ಷ್ಮವಾಗಿ ನಿರ್ಧಾರ ಕೈಗೊಳ್ಳಬೇಕು. ಈ ಎಲ್ಲಾ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆಯು ನೀಡಿರುವ ಈ ಪ್ರಕಟಣೆ ಅಮಾನವೀಯ ಹಾಗೂ ಕಾನೂನಿನ ತತ್ವಗಳಿಗೆ ವಿರೋಧವಾಗಿದೆ.
ಯಾವುದೇ ಸಂಸ್ಥೆಯಾದರೂ ಕೂಡಾ ಹಣ ವಸೂಲಿಗೆ ಕನಿಷ್ಟ ಒಂದು ತಿಂಗಳ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಆದರೆ, ಮೆಸ್ಕಾಂ ಒಂದು ದಿನದ ಮುಂಚಿತವಾಗಿ ಪತ್ರಿಕಾ ಪ್ರಕಟಣೆ ನೀಡಿ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸಿದೆ. ಇಂತಹ ಸಂಕಷ್ಟದ ಸಂದರ್ಭ ಮೆಸ್ಕಾಂ ಜನರ ಪರವಾಗಿ ನಿಲ್ಲಬೇಕು. ಆದರೆ, ಮೆಸ್ಕಾಂ ಸಂಪೂರ್ಣ ಜನ ವಿರೋಧಿ ನಿಲುವನ್ನು ತೆಗೆದುಕೊಂಡದ್ದು ಖಂಡನೀಯ. ಪ್ರಸ್ತುತ ನಗರದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ಸದಸ್ಯರಿರುವ ಮನೆಗಳ ವಿದ್ಯುತ್ ಸ್ಥಗಿತಗೊಳಿಸಿದರೆ ಬಾರಿ ಅನಾಹುತ ಆಗಲಿದೆ.
ಸರ್ಕಾರದ ನಿಯಮಗಳ ಪ್ರಕಾರ, ಕೊರೊನಾ ಪೀಡಿತ ಸಾವಿರಾರು ಸಂಖ್ಯೆಯಲ್ಲಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಹ ಮನೆಗಳ ವಿದ್ಯುತ್ ನಿಲುಗಡೆ ಮಾಡುವುದು ಅತ್ಯಂತ ಕ್ರೂರವಾದ ನಡವಳಿಕೆಯಾಗಿದೆ.
ಕೊರೊನಾದಿಂದ ಕ್ವಾರಂಟೈನ್ನಲ್ಲಿರುವವರು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುವವರು ಮನೆಯಿಂದ ಹೊರಗಡೆ ಹೋಗುವಂತಿಲ್ಲ ಹಾಗೂ ಅವರಿಗೆ ವಿದ್ಯುತ್ ಬಿಲ್ ಪಾವತಿಸಲು ಕಷ್ಟವಾಗುತ್ತದೆ.
ಮೆಸ್ಕಾಂ ಇನ್ನು ಕನಿಷ್ಠ ಎರಡು ತಿಂಗಳವರೆಗೆ ಯಾವುದೇ ಕಾರಣಕ್ಕೂ ಮನೆಗಳ ವಿದ್ಯುತ್ ಸ್ಥಗಿತಗೊಳಿಸಬಾರದು. ಯಾವ ಬಳಕೆದಾರನಿಗೆ ಹಣ ಪಾವತಿ ಮಾಡಲು ಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ಗಮನಿಸಿ ಅವನ ಶಕ್ತಿಗನುಸಾರ ಕಟ್ಟಲು ಅಂತಹವರು ಅವಯಂ ಪ್ರೇರಣೆಯಿಂದ ಮೆಸ್ಕಾಂ ಬಿಲ್ ಕಟ್ಟುವಂತೆ ಜನಾಭಿಪ್ರಾಯ ರೂಪಿಸಬೇಕು. ಆನ್ಲೈನ್ ಮೂಲಕ ಬಿಲ್ ಪಾವತಿಸುವ ಗ್ರಾಹಕರಿಗೆ ಈಗಾಗಲೇ ಸಂಪೂರ್ಣ ಬಿಲ್ನ ಮೊತ್ತವನ್ನು ಕಟ್ಟುವ ಸೌಲಭ್ಯವಿದ್ದು, ಇದನ್ನು ಸಡಿಲಗೊಳಿಸಿ ಅವರಿಗೆ ಶಕ್ತಿಗಾನುಸಾರವಾಗಿ ಹಣ ಪಾವತಿಸಲು ಅವಕಾಶ ನೀಡಬೇಕು. ಮೆಸ್ಕಾಂ ನೀಡುವ ಬಿಲ್ನಲ್ಲಿ ಸರಿಯಾದ ವಿವರಗಳು ಇಲ್ಲದೇ ಇರುವ ಕಾರಣ ಗ್ರಾಹಕರಿಗೆ ನೀಡುವ ಬಿಲ್ಲಿನಲ್ಲಿ ಸರಿಯಾದ ವಿವರ ನೀಡಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಮನವಿಯಲ್ಲಿ ತಿಳಿಸಿದ್ದಾರೆ.