ಮಂಗಳೂರು, ಸೆ. 23 (DaijiworldNews/MB) : ಕೊರೊನಾ ಸೋಂಕು ಹಿನ್ನೆಲೆ ಕೇರಳ ಸರ್ಕಾರ ಈ ಹಿಂದೆ ಮುಚ್ಚಿದ್ದ ಕರ್ನಾಟಕ ಕೇರಳ ಗಡಿ ರಸ್ತೆಗಳನ್ನು ಈಗ ತೆರೆಯಲಾಗಿದ್ದರೂ, ಬಸ್ ಸೇವೆ ಇನ್ನೂ ಪ್ರಾರಂಭವಾಗಿಲ್ಲ. ಇತರೆ ವಾಹನಗಳು ಕೇರಳ ಕರ್ನಾಟಕ ಗಡಿಯಲ್ಲಿ ಸಂಚಾರ ಮಾಡುತ್ತಿದ್ದು ಇನ್ನೂ ಕೂಡಾ ಅನುಮತಿ ದೊರೆಯದ ಕಾರಣ ಅಂತರರಾಜ್ಯ ಬಸ್ ಸೇವೆ ಇನ್ನೂ ಕೂಡಾ ಆರಂಭವಾಗಿಲ್ಲ.

ಸಾಂದರ್ಭಿಕ ಚಿತ್ರ
ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಅಂತರರಾಜ್ಯ ಸಂಚಾರಕ್ಕಿದ್ದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿದ್ದರೂ ಕೂಡಾ ಕೇರಳ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ರಸ್ತೆಗಳನ್ನು ತೆರೆದಿರಲಿಲ್ಲ. ಈ ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣದಿಂದಾಗಿ ಅಂತರ್-ರಾಜ್ಯ ಬಸ್ ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ಸರ್ಕಾರ ತಿಳಿಸಿತ್ತು.
ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಂತರ, ಹೈಕೋರ್ಟ್ ಇತ್ತೀಚೆಗೆ ಕೇರಳ ಸರ್ಕಾರಕ್ಕೆ ಗಡಿ ರಸ್ತೆಗಳನ್ನು ತೆರೆಯುವಂತೆ ಆದೇಶಿಸಿತ್ತು. ಈ ಆದೇಶವನ್ನು ಪಾಲಿಸಿದ ಕೇರಳ ಸರ್ಕಾರ ಎಲ್ಲಾ ರಸ್ತೆಗಳು ಈಗ ಮುಕ್ತಗೊಳಿಸಿದೆ. ಆದರೆ ದಕ್ಷಿಣ ಕನ್ನಡ ಮತ್ತು ಕೇರಳ ನಡುವೆ ಅಂತರರಾಜ್ಯ ಬಸ್ಸುಗಳ ಸಂಚಾರಕ್ಕೆ ಈವರೆಗೂ ಈ ಎರಡು ರಾಜ್ಯಗಳು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಿಂದೆ ಕೇರಳ ಸರ್ಕಾರ ಸೆಪ್ಟೆಂಬರ್ 21 ರಿಂದ ಬಸ್ ಸೇವೆ ಆರಂಭವಾಗಲಿದೆ ಎಂದು ಹೇಳಿದ್ದು ಆದರೆ ಅಂತರ್ ರಾಜ್ಯ ಬಸ್ ಸಂಚಾರ ಆರಂಭವಾಗಿಲ್ಲ.
ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ 21 ಅಂತರರಾಜ್ಯ ರಸ್ತೆಗಳಿದ್ದು, ಆ ಪೈಕಿ 12 ರಸ್ತೆಗಳಲ್ಲಿ ಬಸ್ ಸಂಚಾರ ಮಾಡುತ್ತದೆ. ಕಳೆದ ಆರು ತಿಂಗಳಿನಿಂದ ಕಾಸರಗೋಡು ಮತ್ತು ಮಂಗಳೂರು ನಡುವಿನ ಬಸ್ ಸೇವೆ ಸ್ಥಗಿತಗೊಂಡಿದ್ದು, ಇದರಿಂದಾದೈನಂದಿನ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಲಾಕ್ಡೌನ್ಗೂ ಮುನ್ನ ಮಂಗಳೂರು ಮತ್ತು ಕಾಸರಗೋಡು ನಡುವೆ ಪ್ರತಿದಿನ 5,000 ಜನರು ಪ್ರಯಾಣಿಸುತ್ತಿದ್ದು ಎರಡು ನಗರಗಳ ನಡುವೆ 150 ಕ್ಕೂ ಅಧಿಕ ಬಾರಿ ಬಸ್ ಸಂಚಾರ ಮಾಡುತ್ತಿದ್ದವು. ಆದರೆ ಈಗ ಬಸ್ ಸಂಚಾರವಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಅರುಣ್ ಕುಮಾರ್ ಅವರು, ಕೇರಳಕ್ಕೆ ಬಸ್ ಸೇವೆಗಳನ್ನು ಪ್ರಾರಂಭಿಸುವ ಅಗತ್ಯತೆಯ ಬಗ್ಗೆ ನಿಗಮವು ಉಪ ಆಯುಕ್ತರಿಗೆ ತಿಳಿಸಿದೆ ಎಂದು ತಿಳಿಸಿದ್ದಾರೆ. ಇದು ಅಂತರ್ ರಾಜ್ಯ ಬಸ್ ಸಂಚಾರದ ವಿಚಾರವಾದ ಕಾರಣ ಎರಡೂ ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.