ಮಂಗಳೂರು, ಸೆ 23(Daijiworld News/PY): ಪಾಲಿಕೆಯ ವಾರ್ಡ್ಗಳಲ್ಲಿ ತುರ್ತು ಕಾರ್ಯಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ನಗರದ ಪ್ರತಿಯೊಂದು ವಾರ್ಡ್ಗಳಿಗೆ 25 ಲಕ್ಷ. ರೂ.ಗಳ ಅನುದಾನವನ್ನು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಘೋಷಿಸಿದ್ದು, ಈ ಕ್ರಮವನ್ನು ಟೀಕಿಸಿದ ಪ್ರತಿಪಕ್ಷದ ಸದಸ್ಯರು, ಪಾಲಿಕೆಯಲ್ಲಿ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಪೋರೇಟರ್ಗಳು ಅಭಿವೃದ್ದಿ ಕಾರ್ಯಗಳನ್ನು ಹೇಗೆ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಸೆಪ್ಟೆಂಬರ್ 22 ರ ಮಂಗಳವಾರ ಮಂಗಳ ಸಭಾಂಗಣದಲ್ಲಿ ನಡೆದ ನಗರ ನಿಗಮ ಮಂಡಳಿ ಸಭೆಯನ್ನುದ್ದೇಶಿ ಮಾತನಾಡಿದ ಮೇಯರ್, 25 ಲಕ್ಷ ರೂ.ಗಳ ಅನುದಾನದಿಂದ ರಸ್ತೆ ಅಭಿವೃದ್ಧಿ, ಒಳಚರಂಡಿ, ನೀರು ಸರಬರಾಜು ಮತ್ತು ಇತರ ಕೆಲಸಗಳನ್ನು ವಾರ್ಡ್ಗಳಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿಪಕ್ಷದ ಸದಸ್ಯ ಎ.ಸಿ ವಿನಯರಾಜ್ ಅವರು ಮಾತನಾಡಿ, ಪಾಲಿಕೆಯು ನೀರಿನ ಸಮಗ್ರಹದ 4 ಕೋಟಿ ರೂ.ಗಳನ್ನು ಹೊರತುಪಡಿಸಿ ಪಾಲಿಕೆಯಲ್ಲಿ ಬೇರೆ ಹಣವಿಲ್ಲ. ಕಂದಾಯ ಇಲಾಖೆ ದಿವಾಳಿಯಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿ ಮೇಯರ್ ದಿವಾಕರ್ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗ ಹಿಂದಿನ ಅವಧಿಯಲ್ಲಿದ್ದ ಸಾಲ ಹೆಚ್ಚು ಇತ್ತು ಎಂದರು. ಇಡೀ ರಾಜ್ಯವು ಕೊರೊನಾ ಪ್ರತಿಕೂಲದ ಪರಿಸ್ಥಿತಿಯಲ್ಲಿದ್ದ ಸಮಯದಲ್ಲಿ ಮೇಯರ್ ಅನುದಾನ ಘೋಷಿಸಿದ್ದಾರೆ. ಎಲ್ಲಾ ವಿಚಾರದಲ್ಲಿ ರಾಜಕೀಯವನ್ನು ತರುತ್ತಿದ್ದಾರೆ ಎಂದು ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.
ಈ ವೇಳೆ ಮಾತನಾಡಿದ ವಿನಯ್ರಾಜ್, ನಾನು ಆರೋಪಗಳನ್ನು ಮಾಡುತ್ತಿಲ್ಲ. ಆದರೆ, ಸತ್ಯವನ್ನು ಹೇಳುತ್ತಿದ್ದೇವೆ ಎಂದರು. ಈ ಹೇಳಿಕೆಯಿಂದ ಕೋಪಗೊಂಡ ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಅವರು ಏನು ಮಾಡಿದ್ದಾರೆ ಎಂದು ತಿಳಿದಿದೆ. ಅಲ್ಲದೇ, ನಮಗೆ ಅಧಿಕಾರ ಹಾಗೂ ಆಡಳಿತವನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿದೆ. ಎಲ್ಲದರಲ್ಲೂ ರಾಜಕೀಯ ಮಾಡುವುದು ಬೇಡ ಎಂದು ತಿಳಿಸಿದರು. ಇದರಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗಾಗಿ ಮೀಸಲಿಟ್ಟ ಸ್ಥಳದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ. ಹಿಂದೆ ನಡೆದ ಸಭೆಯಲ್ಲಿ ಕಟ್ಟಡವನ್ನು ತೆರವು ಮಾಡಲು ಆದೇಶಿಸಿದ್ದರೂ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದರು.
ಈ ಹಿಂದೆ 28 ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಹಿಂದಿನ ಸದಸ್ಯರು ಸ್ಥಳ ತಲುಪಲು ರಸ್ತೆ ವ್ಯವಸ್ಥೆ ಮಾಡಿದ್ದರು ಎಂದು ವಾರ್ಡ್ ಸದಸ್ಯೆ ಸಂಗೀತ ನಾಯಕ್ ಹೇಳಿದರು.
ನಿಗಮದ ಆಸ್ತಿಯಲ್ಲಿ ಕಾನೂನುಬಾಹಿರವಾಗಿ ಮನೆಗಳನ್ನು ನಿರ್ಮಿಸಲು ಯಾರಿಗೂ ಅಧಿಕಾರವಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಹೇಳಿದ್ದು, ಈ ವೇಳೆ ಮಾತನಾಡಿದ ಮೇಯರ್, ಹಿಂದಿನ ಎಲ್ಲ ಕಟ್ಟಡಗಳನ್ನು ಖಾಲಿ ಮಾಡಲು ವಿರೋಧ ಪಕ್ಷದ ಸದಸ್ಯರು ಸಿದ್ಧರಿದ್ದಾರೆಯೇ ಎಂದು ಕೇಳಿದರು. ಅಕ್ರಮವಾಗಿರುವ ಕಟ್ಟಡವನ್ನು ತೆಗೆಸಲು ನಮಗೆ ಯಾವ ಅಭ್ಯಂತರವಿಲ್ಲ ಎಂದರು.
ಸಭೆಯಲ್ಲಿ ಉಪ ಮೇಯರ್ ವೇದಾವತಿ, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.