ಮಂಗಳೂರು, ಮೇ 12: ತಾಳಿ ಕಟ್ಟುವ ಕೆಲವೇ ತಾಸುಗಳ ಮೊದಲು ಮದುಮಗಳೊಬ್ಬಳು ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಮದುಮಗಳು ತಾನು ಮದುವೆಗೆಂದು ಉಟ್ಟ ಉಡುಗೆಯಲ್ಲಿಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಇತತರಿಗೆ ಮಾದರಿಯಾಗಿದ್ದಾರೆ.
ಬೊಂದೇಲ್ ಸಮೀಪದ ಪಚ್ಚನಾಡಿ ನಿವಾಸಿಯಾದ ವಿಯೋಲ್ಲ ಫೆರ್ನಾಂಡಿಸ್ ಅವರ ಮದುವೆ ಬೆಳ್ತಂಗಡಿಯ ಸಿಲ್ವೆಸ್ಟರ್ ರೋಡ್ರಿಗಸ್ ಅವರೊಂದಿಗೆ ನಿಶ್ಚಯವಾಗಿತ್ತು. ಮದುವೆ ಮಂಟಪಕ್ಕೆ ತೆರಳಲು ದೂರದ ದಾರಿ ಕ್ರಮಿಸಬೇಕಾಗಿದ್ದ ವಧು ಹಾಗೂ ಮನೆಯವರು ಮತದಾನ ಹಕ್ಕನ್ನು ವ್ಯರ್ಥಗೊಳಿಸಬಾರದು ಎನ್ನುವ ಉದ್ದೇಶದಿಂದ ಮತದಾನ ಆರಂಭವಾಗುವ ಮೊದಲೇ ಬೊಂದೇಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ತಲುಪಿ ಸರತಿ ಸಾಲಿನಲ್ಲಿ ನಿಂತಿದ್ದರು. ಮತಗಟ್ಟೆಯಲ್ಲಿ ಮತದಾನ ಆರಂಭವಾಗುತ್ತಿದ್ದಂತೆಯೇ ಮತದಾನ ಮಾಡಿದ ವಧು ಹಾಗೂ ಕುಟುಂಬ ನಂತರ ಬೆಳ್ತಂಗಡಿಗೆ ಪ್ರಯಾಣ ಬೆಳೆಸಿದ್ದಾರೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ವಧು ವಿಯೋಲ್ಲ, ಇಂದು ನನ್ನ ಜೀವನದಲ್ಲಿ ಮಹತ್ವದ ದಿನ. ಜೀವನದ ನಾಯಕನನ್ನು ಹಾಗೂ ನನ್ನ ಕ್ಷೇತ್ರದ ನಾಯಕನ್ನು ಆರಿಸುವ ದಿನ ಒಂದೇ ಆಗಿರುವುದು ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.