ಕಾಪು, ಸೆ. 24 (DaijiworldNews/MB) : ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ನಮ್ಮ ದೇಶದ ಪ್ರಧಾನಿ ಮೋದಿ ಮತ್ತು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅದ್ಯಾವ ಸಂದರ್ಭದಲ್ಲಿ ಅಪ್ಪಿಕೊಂಡರೋ ಸಾಧ್ಯವಿಲ್ಲ. ಜಗತ್ತಿನಲ್ಲಿ ಮೊದಲ ಸ್ಥಾನ ಟ್ರಂಪ್ ಗೆ ಸಿಕ್ಕಿದ್ದರೆ ಎರಡನೆ ಸ್ಥಾನ ಮೋದಿ ನಿಂತಿದ್ದಾರೆ. ಬಹುಶಃ ಇದು ಕೋವಿಡ್ 19 ನ ಅಪ್ಪುಗೆ ಆಗಿರಬಹುದು ಎಂದು ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮೋದಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಆಡಳಿತ ಪಕ್ಷ ಬಿಜೆಪಿ ಬಗ್ಗೆ ಯಾವುದೇ ಟೀಕೆ ವ್ಯಕ್ತಪಡಿಸದೆ ಮೃದು ಧೋರಣೆ ತಳೆದಿದ್ದೀರಿ ಎನ್ನುವ ಅಭಿಪ್ರಾಯ ಪಕ್ಷದ ಕಾರ್ಯಕರ್ತರದು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸೊರಕೆ, ' ಅಂತದ್ದನ್ನು ನಮ್ಮ ಕಾರ್ಯಕರ್ತರು ಹೇಳಿಲ್ಲ. ಬಹುಶಃ ಯಾರೋ ವಿಘ್ನ ಸಂತೋಷಿಗಳು ಹೇಳಿರಬೇಕು. ಬೂತ್ ಮಟ್ಟದಲ್ಲಿ 111 ಸಭೆ, ಗ್ರಾಮೀಣ ಮಟ್ಟದಲ್ಲಿ 23 ಸಭೆ ನಡೆಸಲಾಗಿದೆ. ಎಲ್ಲಾ ಕಡೆಯೂ ಓಡಾಡ್ತ ಕೆಲಸ ಮಾಡ್ತ ಇದ್ಧೇವೆ ಎಂದರು.
ದೇಶದಲ್ಲಿ ಕೊರೊನಾ ಸೋಂಕನ್ನು ನಿಭಾಯಿಸಿದ ರೀತಿ ಸರಿಯಿಲ್ಲ. ಕೇವಲ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಜಾಗಟೆ ಬಡಿಯಿರಿ ಅದರಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಪ್ರಧಾನಿಯವರು ಎಂದು ಟೀಕಿಸಿದರು.
ಈಗಾಗಲೇ 72 ದಿನ ಲಾಕ್ಡೌನ್ ಆರು ತಿಂಗಳಿಂದ ಕೊರೊನಾ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ 55 ಲಕ್ಷ ತಲುಪಿದೆ. ರೂ 2,000 ಕೋಟಿಯಷ್ಟು ವೈದ್ಯಕೀಯ ಉಪಕರಣಗಳ ಖರೀದಿಸುವುದರಲ್ಲಿ ಭ್ರಷ್ಟಾಚರ ನಡೆದಿದೆ. ಹಿರಿಯಡ್ಕದಲ್ಲಿ ಮರಳು ಹಗರಣ, ಕಾರ್ಕಳದಲ್ಲಿ ಸಿಮೆಂಟ್ ಹಗರಣ ಬೆಳಕಿಗೆ ಬಂದಿವೆ. ಬಿಜೆಪಿ ಕಾರ್ಯಕರ್ತರ ಮನೆಯಲ್ಲಿಯೇ 70 ಲಕ್ಷದಷ್ಟು ಮೌಲ್ಯದ ಮರ ಸೀಜ್ ಮಾಡಲಾಗಿದೆ. ರೇಂಜರ್ನ್ನು ರಾಜಕೀಯ ಪ್ರಭಾವ ಬಳಸಿ ವರ್ಗಾವಣೆ ಕೂಡ ಮಾಡಲಾಗಿದೆ. ಒಟ್ಟಾರೆಯಾಗಿ ಬಿಜೆಪಿ ಪಕ್ಷದ ನಾಯಕರು ಕೊರೊನಾ ಸಮಯವನ್ನು ದುರ್ಬಳಕೆ ಮಾಡಿ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದರು.
ಆರು ತಿಂಗಳಿನಿಂದ ಜನರಿಗೆ ಕೊರೊನಾ ಬಿಟ್ಟು ಬೇರೆ ಯಾವುದೇ ಕಾಯಿಲೆ ಬರಲಿಲ್ವಾ? ಸತ್ತವರೆಲ್ಲ ಕೊರೊನಾದಿಂದಲೇ ಸತ್ರಾ? ಎಂದು ಪ್ರಶ್ನಿಸಿದ ಅವರು ಒಂದು ಕೊರೊನಾ ಸೋಂಕಿತನಿಗೆ ಮೂರು ಲಕ್ಷ ಸರಕಾರದಿಂದ ಅಸ್ಪತ್ರೆಗೆ ಸಿಗುತ್ತೆ. ಇದರಿಂದ ಜನರು ಭಯ ಆತಂಕದಿಂದ ಕೋವಿಡ್ ತಪಾಸಣೆಗೆ ಹೋಗುತ್ತಿಲ್ಲ. ನಾವು ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡ್ತಾ ಇದ್ದೇವೆ, ಎಂದರು.
ಇನ್ನು ಕೆಪಿಸಿಸಿ ಅಧ್ಯಕ್ಷರು ಸೊರಕೆಯವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕದ ಆದೇಶ ವಾಪಾಸು ಪಡೆದ ವಿಚಾರವಾಗಿ, ಸೊರಕೆ "ಬೇರೆ ವಕ್ತಾರರನ್ನು ನೇಮಕ ಮಾಡಿ ಅಂತ ನಾನೆ ಹೇಳಿದ್ದು. ಪ್ರವಾಹ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಓಡಾಟ ಜಾಸ್ತಿ ಇರುತ್ತೆ, ಎಂದು ಸ್ಪಷ್ಟಪಡಿಸಿದರು.
ಇನ್ನು ಪ್ರವಾಹ ಸಂದರ್ಭವನ್ನು ನಿರ್ವಹಣೆ ಮಾಡಿದ ರೀತಿಯ ಬಗ್ಗೆ ಅಸಮಾಧಾನ ತೋರುತ್ತಾ, 'ಸಂಸದೆ ಶೋಭಾ ಕರಂದ್ಲಾಜೆಯವರು ಹೇಳಿದ ಹೆಲಿಕಾಪ್ಟರ್ ಪ್ರವಾಹ ಇಳಿಯುವವರೆಗೆ ಜಿಲ್ಲೆಗೆ ಬರಲೇ ಇಲ್ಲ, ಎಂದು ಟೀಕಿಸಿದರು.
ಈ ತುರ್ತುಸ್ಥಿತಿಯಲ್ಲಿ ಊರಿನ ಜನರ ಸಹಾಯದಿಂದ ಪ್ರವಾಹಕ್ಕೆ ಸಿಲುಕಿದವರನ್ನು ಕಾಪಾಡಿದ್ದಾರೆ. ಎನ್ಡಿಆರ್ಎಫ್ ತಂಡ ತಡವಾಗಿ ಬಂದಿದೆ. ಕೆಲವು ಕಡೆ ಅಧಿಕಾರಿಗಳು ತಲುಪಲು ತಡವಾಗಿದೆ. 43 ವರ್ಷದ ನಂತರ ಇಂತಹ ಜಲಪ್ರವಾಹ ಉಡುಪಿಗೆ ತಟ್ಟಿದೆ. ಆದಷ್ಟು ಬೇಗ ಸರಕಾರ ಪರಿಹಾರ ನೀಡಲಿ. ಆಸ್ತಿ ಪಾಸ್ತಿ ನಷ್ಟವಾಗಿರುವವರಿಗೆ ಮಾತ್ರ ಅಲ್ಲದೆ ಎಲೆಕ್ಟ್ರಾನಿಕ್ ವಸ್ತುಗಳು ನಾಶವಾದವರಿಗೆ, ಪಶು ಪ್ರಾಣಿ ಕಳೆದು ಕೊಂಡವರಿಗೆ ಪರಿಹಾರ ಸಿಗಲಿ. ಆದಷ್ಟು ಹೆಚ್ಚಿನ ಪ್ರಕೃತಿ ವಿಕೋಪ ಪರಿಹಾರವನ್ನು ಬಿಡುಗಡೆ ಮಾಡಲಿ ಎಂದು ಮಾಜಿ ಶಾಸಕ ಸೊರಕೆಯವರು ಸರಕಾರವನ್ನು ಒತ್ತಾಯಿಸಿದರು.