ಮಂಗಳೂರು, ಸೆ 24(DaijiworldNews/PY): ಲೇಡಿಹಿಲ್ ವೃತ್ತದ ಹೆಸರನ್ನು ಬದಲಾಯಿಸುವ ವಿಚಾರದಲ್ಲಿ ವಿವಾದವಾಗುತ್ತಿರುವ ನಡುವೆ ಸೆ.23ರ ಬುಧವಾರದಂದು ಸಂಜೆ ವೃತ್ತದಲ್ಲಿ ಬಜರಂಗದಳದ ಧ್ವಜ ಹೊಂದಿರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಬರೆದಿರುವ ಫ್ಲೆಕ್ಸ್ ಕಂಡುಬಂದಿದ್ದು, ಸ್ವಲ್ಪ ಸಮಯದವರೆಗೆ ಆತಂಕಕ್ಕೆ ಕಾರಣವಾಯಿತು.

ಲೇಡಿ ಹಿಲ್ ವೃತ್ತದ ಹೆಸರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ವಿಚಾರವಾಗಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಆದ್ದರಿಂದ ಪೊಲೀಸರು ಫ್ಲೆಕ್ಸ್ ಅನ್ನು ತೆರವುಗೊಳಿಸಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಥೋಲಿಕ್ ಸಭಾ ಮುಖಂಡರು ಮಂಗಳೂರು ನಗರ ನಿಗಮದ (ಎಂಸಿಸಿ) ಮೇಯರ್ಗೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಆಯುಕ್ತರು ಹಾಗೂ ಮೇಯರ್ ಅವರನ್ನು ಉದ್ದೇಶಿಸಿ ಬರೆಯಲಾಗಿರುವ ಮನವಿ ಪತ್ರದಲ್ಲಿ ಕಥೋಲಿಕ್ ಸಭಾ ''ಲೇಡಿಹಿಲ್'' ಹೆಸರಿನ ಐತಿಹಾಸಿಕ ಮಹತ್ವ ಮತ್ತು ಹೆಸರಿಗೆ ಇರುವ ಭಾವಾನಾತ್ಮಕ ಸಂಬಂಧಗಳ ಬಗ್ಗೆ ವಿವರಿಸಲಾಗಿದೆ. ಅಲ್ಲದೇ, ಬಸ್ಸುಗಳು ಹಾಗೂ ಬಸ್ಸು ನಿಲ್ದಾಣಗಳು ಬಳಸುತ್ತಿರುವ ಹೆಸರುಗಳ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಫ್ರಾನ್ಸಿನಿಂದ ಮಂಗಳೂರಿಗೆ 1885 ನೇ ಇಸವಿಯಲ್ಲಿ ಅಂದಿನ ಮದರ್ ಜನರಲ್ ಮಾರಿ ದೇಸ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಶಾಲೆ ತೆರೆಯಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಪಡಿಸಿದ್ದರು. ಆ ಸಂದರ್ಭದಲ್ಲಿ ಅದೊಂದು ಗುಡ್ಡ ಪ್ರದೇಶವಾಗಿತ್ತು. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಇರಲಿಲ್ಲ. ಆದುದರಿಂದ ಸ್ಥಳೀಯ ಜನರ ಒತ್ತಾಯದ ಮೇರೆಗೆ, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯಲಾಗಿತ್ತು. ಈ ಶಾಲೆಯ ಮುಖಾಂತರ ಸಾವಿರಾರು ಹೆಣ್ಮಕ್ಕಳು ವಿದ್ಯಾಭ್ಯಾಸ ಹೊಂದಿ ಜೀವನದಲ್ಲಿ ಸಾಧನೆಯನ್ನು ಮಾಡಿದ್ದರು. ಸ್ಥಳೀಯ ಜನರು ಹೆಣ್ಮಕ್ಕಳ ಮೇಲಿನ ಅಭಿಮಾನದಿಂದ ಮತ್ತು ಗೌರವ ತೋರಿಸಲು ಈ ಸ್ಥಳಕ್ಕೆ ಲೇಡಿಹಿಲ್ ಎಂದು ನೂರಾರು ವರ್ಷಗಳಿಂದ ಕರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಗರ ನಿಗಮ ಮಂಡಳಿಯು ಸೆಪ್ಟೆಂಬರ್ 22 ರಂದು ನಡೆದ ಅಧಿವೇಶನದ ಕಾರ್ಯಸೂಚಿಯಲ್ಲಿ ವೃತ್ತದ ಮರುನಾಮಕರಣವನ್ನು ಸೇರಿಸಲು ಪ್ರಸ್ತಾಪಿಸಿತ್ತು, ಆದರೆ ವೃತ್ತದ ಮರುನಾಮಕರಣದ ವಿರುದ್ಧ ಸಮಾಜದ ವಿವಿಧ ವರ್ಗಗಳಿಂದ ಪಡೆದ ಆಕ್ಷೇಪಣೆಗಳು ಮತ್ತು ವಿನಂತಿಗಳ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಮುಂದೂಡಲು ನಿರ್ಧರಿಸಿತ್ತು.
ಅಲ್ಲದೇ, ಈ ನಡುವೆ ಖಾಸಗಿ ಬಸ್ ಮಾಲೀಕರು ಲೇಡಿಹಿಲ್ ಜಂಕ್ಷನ್ ಅನ್ನು ನಾರಾಯಣ ಗುರು ವೃತ್ತಕ್ಕೆ ಮರುನಾಮಕರಣ ಮಾಡುವುದನ್ನು ಬೆಂಬಲಿಸಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.