ಮಂಗಳೂರು, ಸೆ. 24 (DaijiworldNews/SM): ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿರುವ ಆರೋಗ್ಯ ಇಲಾಖೆಯ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರ ಗುತ್ತಿಗೆ ನೌಕರರು, ವೈದ್ಯಕೀಯ, ಅರೆವೈದ್ಯಕೀಯ, ಕಚೇರಿ ಸಿಬ್ಬಂದಿಗಳ ಮುಷ್ಕರ ನಡೆಸುತ್ತಿದ್ದು, ಸರಕಾರಕ್ಕೆ ಕೋವಿಡ್ ವರದಿ ಸಲ್ಲಿಸದಿರಲು ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದ ತಮ್ಮ ಬೇಡಿಕೆ ಈಡೇರುವ ತನಕ ಸರಕಾರಕ್ಕೆ ಕೋವಿಡ್ ಸೇರಿದಂತೆ ಇತರ ವರದಿ ಸಲ್ಲಿಸದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘ ಪತ್ರ ಮುಖೇನ ಬುಧವಾರವೇ ಸರಕಾರಕ್ಕೆ ಪತ್ರ ಮುಖೇನ ತಿಳಿಸಿದ್ದಾರೆ. ಅಲ್ಲದೆ, ಇಂದು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿಲ್ಲ.
ಸೆಪ್ಟೆಂಬರ್ 24ರಿಂದ ಬೇಡಿಕೆ ಈಡೇರುವ ತನಕ ಮುಷ್ಕರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಜಿಲ್ಲಾ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಗಳು ಹಲವಾರು ವರ್ಷಗಳಿಂದ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸದೆ ಇರುವುದರಿಂದ ಅನಿವಾರ್ಯವಾಗಿ ಮುಷ್ಕರದ ನಿರ್ಣಯ ಕೈಗೊಂಡಿದ್ದಾರೆ.