ಉಪ್ಪಿನಂಗಡಿ, ಸೆ 25(DaijiworldNews/PY): ಆಸಿಡ್ ದಾಳಿ ನಡೆಸಿ ಪರಾರಿಯಾದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಬಿಜು ಥೋಮಸ್ ಬಂಧಿತ ಆರೋಪಿ.
ಸೆ.24ರ ಗುರುವಾರದಂದು ಆರೋಪಿ ಬಿಜಿ ಥೋಮಸ್ ತನ್ನ ಪತ್ನಿ ಶೈನಿ ಹಾಗೂ ಅವರ ಸಂಬಂಧಿ ಝಾನ್ಸಿ ಎಂಬವರ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪರಾರಿಯಾಗುವ ಉದ್ದೇಶದಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಿದ್ದಾಗ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಪುತ್ತೂರು ವೃತ್ತಕಛೇರಿಯ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ದ್ವೇಷದಿಂದ ಕೊಲ್ಲುವ ಉದ್ದೇಶ ಹೊಂದಿದ್ದು ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು, ತನಿಖೆ ಪ್ರಗತಿಯಲ್ಲಿದೆ.