ಬಂಟ್ವಾಳ,ಮೇ13: ಬಂಟ್ವಾಳ ಕ್ಷೇತ್ರದ ಮತಗಟ್ಟೆ ಸಂಖ್ಯೆ 59 ಹಾಗೂ ಪುತ್ತೂರು ಕ್ಷೇತ್ರದ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದಂತೆ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ ಬಿ ಆರ್ ರವಿಕಾಂತೇ ಗೌಡ ಹೇಳಿದ್ದಾರೆ.
ಆರೋಪಿಗಳಾದ ಅಸ್ಸಾಂ ಮೂಲದ ಚೋಝನ್ ಚೇಂಜ್, ಅಜಯ್ ಮೆನ್ಸ್ ಬೇರೊಬ್ಬರ ಹೆಸರಿನಲ್ಲಿ ಮತದಾನಕ್ಕೆ ಯತ್ನಿಸಿದ್ದು ಈ ಸಂದರ್ಭ ಅವರು ನಕಲಿ ಮತದಾನ ಮಾಡುವುದು ಖಚಿತವಾಗಿದೆ. ಬಂಟ್ವಾಳದ ಅಗ್ರಾರ್ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ್ದರು. ಪುತ್ತೂರು ಕ್ಷೇತ್ರದಲ್ಲಿ ನೆಟ್ಟಣಿಗೆ ಮುಡ್ನೂರು ಆಲಂತಡ್ಕ ಮತಗಟ್ಟೆಯಲ್ಲಿ ಶಕೀರ್ ಎಂಬಾತ ನಕಲಿ ಮತದಾನಕ್ಕೆ ಯತ್ನಿಸಿದ್ದ ಎಂದು ಎಸ್ಪಿ ತಿಳಿಸಿದ್ದಾರೆ.