ಉಡುಪಿ, ಸೆ 25(DaijiworldNews/PY): ಹಿರಿಯಡ್ಕದಲ್ಲಿ ಸೆ.24ರ ಗುರುವಾರದಂದು ನಡೆದ ಕಿಶನ್ ಹೆಗ್ಡೆ ಅವರ ಹತ್ಯೆ ಪಕ್ರರಣಕ್ಕೆ ಸಂಬಂಧಿಸಿದಂತೆ ಕಿಶನ್ ಜೊತೆಗಿದ್ದ ದಿವ್ಯರಾಜ್ ಶೆಟ್ಟಿ ನೀಡಿದ ದೂರಿನಂತೆ ಬಿಳಿ ಬಣ್ಣದ ರಿಟ್ಸ್ ಕಾರನ್ನು ಪೊಲೀಸರು ನಿನ್ನೆ ವಶಕ್ಕೆ ಪಡೆದುಕೊಂಡಿದ್ದಾರೆ.

ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ಅವರ ನಡುವಿನ ಹಣಕಾಸಿನ ವಿಚಾರದಲ್ಲಿ ವೈಮನಸ್ಸಿನಿಂದ ಮನೋಜ್ ಕೋಡಿಕೆರೆ ಅವರು ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ಕಿಶನ್ ಹೆಗ್ಡೆ ಹಾಗೂ ಹರಿಪ್ರಸಾದ್ ಶೆಟ್ಟಿ ಅವರ ಜೊತೆಯಲ್ಲಿ ಕಾರಿನಲ್ಲಿ ಉಡುಪಿಗೆ ಬಂದಿದ್ದು, ಕಿಶನ್ ಹೆಗ್ಡೆಯವರು ಅವರ ವಕೀಲರಲ್ಲಿ ಮಾತುಕತೆ ನಡೆಸಿ ಬಳಿಕ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಹೋಗಲು ಕಿಶನ್ ಹೆಗ್ಡೆಯವರು ಚಲಾಯಿಸುತ್ತಿದ್ದ ಕಾರಿನಲ್ಲಿ ಹರಿಪ್ರಸಾದ್ ಶೆಟ್ಟಿ ಅವರು ಕಾರಿನ ಮುಂಭಾಗದ ಎಡಬದಿ ಸೀಟಿನಲ್ಲಿ, ದಿವ್ಯ ರಾಜ್ ಶೆಟ್ಟಿ ಅವರು, ಕಾರಿನ ಹಿಂಭಾಗದಲ್ಲಿ ಕುಳಿತಿದ್ದರು.
ಕಾರು ಹಿರಿಯಡ್ಕ ವೀರಭದ್ರ ದೇವಸ್ಥಾನದ ಉತ್ತರ ಪ್ರವೇಶ ದ್ವಾರದ ಬಳಿ ಬಂದು ಕಾರ್ಕಳ ರಸ್ತೆಯ ಬಲ ಪಾಶ್ವದಲ್ಲಿ ಕಾರನ್ನು ಪಾರ್ಕ್ ಮಾಡಿ ಹರಿಪ್ರಸಾದ್ ಶೆಟ್ಟಿ ಅವರು ಕಾರಿನ ಬಾಗಿಲನ್ನು ತೆರೆದು ಇಳಿಯುವಷ್ಟರಲ್ಲಿ ಕಾರಿನ ಮುಂದಿನಿಂದ 4-5 ಜನ ವ್ಯಕ್ತಿಗಳು ತಲವಾರು, ಸುತ್ತಿಗೆಯಂತಹ ಮಾರಕ ಆಯುಧಗಳೊಂದಿಗೆ ಬಂದು ಒಬ್ಬಾತನು ಏಕಾ-ಏಕಿಯಾಗಿ ಕಾರಿನ ಮುಂದಿನ ಗಾಜಿಗೆ ಸುತ್ತಿಗೆಯಿಂದ ಹೊಡೆದಿದ್ದರು.
ದಿಡೀರ್ ದಾಳಿಯಿಂದ ಗಾಬರಿಗೊಂಡು ನೋಡುವಷ್ಟರಲ್ಲಿ ಇನ್ನೂ 3-4 ಜನ ವ್ಯಕ್ತಿಗಳು ತಲವಾರು ಮಚ್ಚುಗಳನ್ನು ಹಿಡಿದುಕೊಂಡು ಕಾರಿನ ಹಿಂದಿನಿಂದ ಬಂದು ಕಿಶನ್ ಹೆಗ್ಡೆಯವರು ಕುಳಿತ್ತಿದ್ದ ಬದಿಯ ಡೋರ್ನ ಗಾಜನ್ನು ಹೊಡೆದು ಜಖಂಗೊಳಿಸಿ ಇವರ ಪರಿಚಯದ ಮನೋಜ್ ಎಂಬಾತನು ಕಿಶನ್ ಹೆಗ್ಡೆಯವರನ್ನು ತಲವಾರಿನಿಂದ ಗಾಯಗೊಳಿಸಿದ್ದು, ಆ ಸಮಯ ಕಿಶನ್ ಹೆಗ್ಡೆ ಅವರು ಎಡ ಬದಿಯಲ್ಲಿ ತೆರೆದಿದ್ದ ಬಾಗಿಲಿನಿಂದ ಜಿಗಿದು ಹೊರಗೆ ಓಡಿದ್ದು, ದಿವ್ಯ ರಾಜ್ ಶೆಟ್ಟಿ ಅವರು ಕಾರಿನಿಂದ ಇಳಿದು ಕಾರಿನ ಬಳಿಯಲ್ಲಿದ್ದವರನ್ನು ತಡೆಯಲು ಪ್ರಯತ್ನಿಸುವಷ್ಟರಲ್ಲಿ ಅವರುಗಳು ತಮ್ಮ ಕೈಯಲ್ಲಿದ್ದ ತಲವಾರಿನಿಂದ ದಿವ್ಯ ರಾಜ್ ಶೆಟ್ಟಿ ಅವರ ಕುತ್ತಿಗೆಗೆ ಬೀಸಿದ್ದು, ಆಗ ದಿವ್ಯ ರಾಜ್ ಶೆಟ್ಟಿರವರು ತಪ್ಪಿಸಿಕೊಂಡಿದ್ದಾರೆ.
ಆರೋಪಿಗಳು ದಿವ್ಯ ರಾಜ್ ಶೆಟ್ಟಿ ಕಿಶನ್ ಹೆಗ್ಡೆಯವರನ್ನು ರಕ್ಷಿಸಲು ಹೋಗದಂತೆ ತಡೆದಿದ್ದು, ಆಗ ದಿವ್ಯ ರಾಜ್ ಶೆಟ್ಟಿ ಉರುಳಾಡಿ ತಪ್ಪಿಸಿಕೊಂಡು ರಸ್ತೆಗೆ ಬಂದಾಗ ಮನೋಜ್ ಹಾಗೂ ಇತರರು ಕಿಶನ್ ಹೆಗ್ಡೆ ಅವರನ್ನು ಸ್ವಲ್ಪ ದೂರ ರಸ್ತೆಯಲ್ಲಿ ತಡೆದು ಹಲ್ಲೆ ನಡೆಸಿದ್ದು, ಕಿಶನ್ ರಸ್ತೆಯ ಮೇಲೆ ಬಿದ್ದರು. ಅದೇ ಸಮಯದಲ್ಲಿ ಆರೋಪಿತರು ಬಿಳಿ ಬಣ್ಣದ ರಿಟ್ಸ್ ಕಾರಿನಲ್ಲಿ, ಇನ್ನೂ ಕೆಲವರು ತಿಳಿ ಹಳದಿ ಬಣ್ಣದ ಇನ್ನೋವಾ ಕಾರಿನಲ್ಲಿ ಕಾರ್ಕಳ ಕಡೆಗೆ ತೆರಳಿದ್ದರು.
ಆರೋಪಿತರು ನಡೆಸಿದ ಕೃತ್ಯದಿಂದ ಕಿಶನ್ ಹೆಗ್ಡೆ ತಲೆಗೆ ತೀವ್ರವಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಹರಿಪ್ರಸಾದ್ ಶೆಟ್ಟಿ ಅವರ ತಲೆಯ ಎಡಬದಿಗೆ ಪೆಟ್ಟಾಗಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.