ಮಂಗಳೂರು,ಮೇ13: ಚುನಾವಣೆಯ ಮತ ಎಣಿಕೆಯ ವಿಜಯೋತ್ಸವದ ದಿನ ಪಟಾಕಿ ಹೊಡೆಯಲೇ ಬೇಕು. ಆದರೆ ಈ ಬಾರಿ ವಿಜಯೋತ್ಸವಕ್ಕೆ ಯಾರೇ ಆಗಲೀ ಪಟಾಕಿ ಸಿಡಿಸುವಂತಿಲ್ಲ. ಇದಕ್ಕೆ ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಸಸಿಕಾಂತ ಸೆಂಥಿಲ್ ಹೊರಡಿಸಿರುವ ಆದೇಶ. ವಿಜಯೋತ್ಸವಕ್ಕೆ ನಿಷೇಧ ಇದ್ದರೂ ಇದುವರೆಗೆ ಪಟಾಕಿ ಸಿಡಿಸುವುದಕ್ಕೆ ನಿಷೇಧ ಇದುವರೆಗೆ ಇರಲಿಲ್ಲ. ಆದರೆ ಈ ಬಾರಿ ಚುನಾವಣಾ ಆಯೋಗ ಇದಕ್ಕೂ ನಿರ್ಬಂಧ ವಿಧಿಸಿದೆ.
ಪಟಾಕಿ ಸಿಡಿಸುವುದಕ್ಕೆ ಮಾತ್ರವಲ್ಲದೆ, ಪಟಾಕಿ ಮಾರಾಟ ಮಾಡುವುದಕ್ಕೂ ನಿಷೇಧ ವಿಧಿಸಲಾಗಿದೆ. ಮತ ಎಣಿಕೆ ನಡೆಯುವ ಮೇ 15ರಂದು ಬೆಳಿಗ್ಗೆ 10 ಗಂಟೆಯಿಂದ ಮೇ 17ರ ಸಂಜೆ 5 ಗಂಟೆಯವರೆಗೆ ಯಾರೂ ಕೂಡಾ ಪಟಾಕಿ ಸಿಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಖಡಕ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ವಿಜಯೋತ್ಸವದ ದಿನ ಮೆರವಣಿಗೆ, ಪಟಾಕಿಸಿಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.