ಕಾರ್ಕಳ, ಸೆ. 25 (DaijiworldNews/SM): ಹಿರಿಯಡ್ಕದ ಪೇಟೆಯಲ್ಲಿ ಹಾಡುಹಗಲು ರೌಡಿಶೀಟರ್ ಇನ್ನಾದ ಕಿಶನ್ಹೆಗ್ಡೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳು ಬಳಸಿದ್ದ ಕಾರೊಂದು ಉಭಯ ಜಿಲ್ಲಾ ಗಡಿಭಾಗವಾದ ಇರ್ವತ್ತೂರಿನಲ್ಲಿ ಪತ್ತೆಯಾಗಿದೆ.

ಎರಡು ಕಾರುಗಳಲ್ಲಿ ಬಂದಿದ್ದ ಆರೋಪಿತರು ಕಿಶನ್ ಹೆಗ್ಡೆಯನ್ನು ಯದ್ವಾತದ್ವವಾಗಿ ಕಡಿದು ಕೊಲೆಗೈದಿದ್ದರು. ಆರೋಪಿಗಳು ಒಂದು ಕಾರನ್ನು ಅಲ್ಲಿಯೇ ಬಿಟ್ಟು ಮತ್ತೊಂದು ಕಾರಿನಲ್ಲಿ ಕಾರ್ಕಳ ಮಾರ್ಗವಾಗಿ ಪರಾರಿಯಾಗಿದ್ದರು.
ಕೆಎ-21-ಪಿ-4377 ನಂಬ್ರದ ಕಾರು ಇರ್ವತ್ತೂರಿನ ಹಾಡಿಯ ಬಳಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ನಿಲ್ಲಿಸಿದ್ದು, ಇದೇ ಕಾರು ಹಿರಿಯಡ್ಕದ ಕೊಲೆಗೆ ಬಳಸಲಾಗಿತ್ತೆಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಆ ಕಾರನ್ನು ವಶಪಡಿಸಿದ್ದಾರೆ.
ಇನ್ನು ಕೃತ್ಯದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಅವರಲ್ಲಿ ಮೂವರು ಧರ್ಮಸ್ಥಳ ಕಡೆಗೆ ಪರಾರಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಇನ್ನೂ ಮೂವರು ಕಾರ್ಕಳದ ಪರಿಸರದಲ್ಲಿ ಬೀಡು ಬಿಟ್ಟಿದ್ದರು. ಕೊಲೆಗೀಡಾದ ಕಿಶನ್ಹೆಗ್ಡೆ ಕಾರ್ಕಳ ನಗರಕ್ಕೆ ಬುಧವಾರದಂದು ತನ್ನ ಜೊತೆಗಾರರೊಂದಿಗೆ ಬಂದಿದ್ದ ಮಾಹಿತಿಯೂ ಲಭಿಸಿದೆ.