ದೆಹಲಿ,ಮೇ13: ಭಾರತದಲ್ಲಿ ಹೆತ್ತವರು, ಗುರು ಹಿರಿಯರಿಗೆ ಹೆಚ್ಚಿನ ಆದ್ಯತೆ ನೀಡಿದೆ ಆದರೆ, ಇತ್ತೀಚಿನ ದಿನಗಳಲ್ಲಿ ಹೆತ್ತವರನ್ನು ಕಡೆಗಣಿಸುವ ಮಕ್ಕಳೇ ಹೆಚ್ಚು. ಅಂತವರಿಗೊಂದು ಶಾಕಿಂಗ್ ಸುದ್ದಿ. ವಯಸ್ಸಾಗಿರುವ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಹಾಗೂ ಅವರನ್ನು ಅವಹೇಳನ ಮಾಡುವ ಮಕ್ಕಳು ಇನ್ನು ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹೆತ್ತವರು ಮತ್ತು ಹಿರಿಯ ನಾಗರಿಕರ ಕ್ಷೇಮಪಾಲನೆ ಹಾಗೂ ಕಲ್ಯಾಣ ಕಾಯ್ದೆ 2007ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಅದು ಜಾರಿಯಾದರೆ ಹೆತ್ತವರನ್ನು ದೂರ ಮಾಡುವ ಮಕ್ಕಳು ಹೆಚ್ಚಿನ ಅವಧಿಯ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಹೆತ್ತವರಿಗಾಗಿ ಮಕ್ಕಳು ನೀಡುವ 10 ಸಾವಿರ ರೂಪಾಯಿಗಳನ್ನು ಅವರವರ ಆದಾಯಕ್ಕನುಗುಣವಾಗಿ ಪರಿಷ್ಕರಿಸಲೂ ಇದೀಗ ನಿರ್ಧರಿಸಲಾಗಿದೆ. ಬದಲಾಗಿರುವ ಸಾಮಾಜಿಕ ಸ್ಥಿತಿಗತಿಗೆ ಅನುಗುಣವಾಗಿ ಬದಲಾವಣೆ ಮಾಡಿ ಹೆತ್ತವರು ಮತ್ತು ಹಿರಿಯ ನಾಗರಿಕರ ಕಲ್ಯಾಣದ ಕರಡು ಮಸೂದೆ 2018 ಎಂದು ಹೆಸರಿಡಲಾಗಿದೆ. ಕೇಂದ್ರ ಸಂಪುಟದಲ್ಲಿ ಕರಡು ಮಸೂದೆಗೆ ಒಪ್ಪಿಗೆ ಸಿಕ್ಕಿದ ಕೂಡಲೇ 2007ರ ಕಾಯ್ದೆ ಸ್ಥಾನದಲ್ಲಿ ಹೊಸ ಕಾಯ್ದೆ ಜಾರಿಯಾಗಲಿದೆ.