ಕಾರ್ಕಳ, ಸೆ.26 (DaijiworldNews/HR): ಹಿರಿಯಡ್ಕ ಪೇಟೆಯಲ್ಲಿ ಗುರುವಾರದಂದು ಹಾಡು ಹಗಲೇ ನಡೆದ ಕಿಶನ್ ಹೆಗ್ಡೆಯ ಕೊಲೆ ಪ್ರಕರಣ ಬೇಧಿಸಲು ಪೊಲೀಸರ ನಾಲ್ಕು ತನಿಖಾ ತಂಡ ರಚಿಸಲಾಗಿದ್ದು ಆರೋಪಿಗಳ ಪತ್ತೆಗಾಗಿ ಬೆಂಗಳೂರು ಮತ್ತು ಮಂಗಳೂರಿಗೆ ಆ ತಂಡ ತೆರಳಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕಿಶನ್ ಜೊತೆಗಿದ್ದ ದಿವ್ಯರಾಜ್ ಶೆಟ್ಟಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು ಇರ್ವತ್ತೂರಿನ ಹಾಡಿಯ ಬಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈಗಾಗಲೇ ಆರೋಪಿಗಳ ಗುರುತನ್ನು ದಿವ್ಯರಾಜ್ ಪೋಲಿಸರಿಗೆ ತಿಳಿಸಿದ್ದು, ಕೃತ್ಯದಲ್ಲಿ ಭಾಗಿಯಾದವರಲ್ಲಿ ಮೂವರು ಧರ್ಮಸ್ಥಳ ಕಡೆಗೆ ಪರಾರಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಇನ್ನೂ ಮೂವರು ಕಾರ್ಕಳ ಪರಿಸರದಲ್ಲಿ ಬೀಡು ಬಿಟ್ಟಿದ್ದಾರೆನ್ನಲಾಗಿದೆ. ಕೊಲೆಗೀಡಾದ ಕಿಶನ್ಹೆಗ್ಡೆ ಬುಧವಾರ ತನ್ನ ಜತೆಗಾರರೊಂದಿಗೆ ಕಾರ್ಕಳಕ್ಕೆ ಬಂದಿದ್ದ.
ಕೆಲವು ಮೂಲಗಳ ಪ್ರಕಾರ ಮನೋಜ್ ಮತ್ತು ಕಿಶನ್ ಸ್ನೇಹಿತರಾಗಿದ್ದು, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ವೈಶಮ್ಯ ಬೆಳೆದಿತ್ತು. ಅಲ್ಲದೆ ಕಿಶನ್ ಗೆ ಭೂಗತ ಪಾತಕಿಗಳೊಂದಿಗೂ ಸಂಪರ್ಕವಿತ್ತು ಎನ್ನಲಾಗುತ್ತಿದೆ. ಈ ವೈಷಮ್ಯದಿಂದಲೇ ಕಿಶನ್ ಕೊಲೆ ನಡೆದಿದೆ ಎಂದು ಸಂಶಯ ವ್ಯಕ್ತವಾಗಿದೆ. ಅದೇನೆ ಇದ್ದರು ಆರೋಪಿಗಳು ಪೋಲಿಸರ ವಶಕ್ಕೆ ಸಿಕ್ಕದ ಮೇಲೇಯೆ ನಿಜಾಂಶ ಹೊರಬೀಳಲಿದೆ.