ಮಂಗಳೂರು, ಸೆ. 26 (DaijiworldNews/MB) : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಪಡೆದಿರುವ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರ ವಿಚಾರಣೆ ಮುಕ್ತಾಯವಾಗಿದೆ. ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಸತತ ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆದಿದೆ.








ವಿಚಾರಣೆ ಮುಕ್ತಾಯವಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅನುಶ್ರೀ ಅವರು, ನೋಟಿಸ್ ನೀಡಿದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಿದ್ದು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೂ ಯಾವುದೇ ಸಂದರ್ಭದಲ್ಲೂ ಹಾಜರಾಗುತ್ತೇನೆ.
ತರುಣ್ ರಾಜ್ 12 ವರ್ಷಗಳ ಹಿಂದೆ 6 ತಿಂಗಳು ನನಗೆ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದು ಈ ವೇಳೆ ಮಾತ್ರ ತರುಣ್ ರಾಜ್ ಪರಿಚಯವಾಗಿದೆ. ಡ್ರಗ್ಸ್ ಬಗ್ಗೆ ತರಣ್ ಜೊತೆ ಯಾವುದೇ ಸಂಬಂಧ ಇಲ್ಲ. ನಾನು ತರುಣ್ ಡ್ಯಾನ್ಸ್ ಕ್ಲಾಸ್ನ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ. ಪೊಲೀಸರು ಇಂದು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದು ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ ಎಂದು ಹೇಳಿದ ಅನುಶ್ರೀ ಅವರು, ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಪಾರ್ಟಿ ವಿಚಾರವಾಗಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾರ್ಟಿಯಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅವರು ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ಸ್ ಆದ ಕಾರಣ ವಿಚಾರಣೆಗೆ ಕರೆದಿದ್ದು ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಇವರಿಬ್ಬರು ಕೂಡಾ 12 ವರ್ಷಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ಸ್ ಆಗಿದ್ದರು ಎಂದು ಹೇಳಿದ್ದಾರೆ.
ಇನ್ನು ಶುಕ್ರವಾರ ಅನುಶ್ರೀ ವಿಚಾರಣೆಗೆ ಹಾಜರಾಗದ ಕುರಿತಾಗಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂದು ಬೆಳಿಗ್ಗೆ ವಿಚಾರಣೆ ಇದ್ದ ಕಾರಣ ನಾನು ನಿನ್ನೆ ಬೆಂಗಳೂರಿನಿಂದ ಇಲ್ಲಿಗೆ ಹೊರಟು ಇಂದು ವಿಚಾರಣೆಗೆ ಹಾಜರಾಗಿದ್ಧೇನೆ. ಹೇಳಿದ ಸಮಯಕ್ಕೆ ಹಾಜರಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ನಂತರ ಅನುಶ್ರೀ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಶ್ ಅವರನ್ನು ಭೇಟಿಯಾದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, "ಅಗತ್ಯವಿದ್ದರೆ, ಹೆಚ್ಚಿನ ವಿಚಾರಣೆಗೆ ಅನುಶ್ರೀ ಅವರನ್ನು ಮತ್ತೆ ಕರೆಯಲಾಗುವುದು. ಡ್ರಗ್ ಪಾರ್ಟಿಗೆ ಸಂಬಂಧಿಸಿದ ತನಿಖೆ ಪ್ರಕ್ರಿಯೆಯಲ್ಲಿದೆ. ತನಿಖೆ ಪೂರ್ಣಗೊಂಡಿಲ್ಲ. ಸದ್ಯ ಯಾರಿಗೂ ನೋಟಿಸ್ ನೀಡಿಲ್ಲ" ಎಂದು ಹೇಳಿದರು.