ಮಂಗಳೂರು,ಮೇ13: ರಾಜ್ಯ ವಿಧಾನ ಸಭಾ ಚುನಾವಣೆಗಳು ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಅವಿಭಜಿತ ಜಿಲ್ಲೆ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ 8 ಮತ್ತು ಉಡುಪಿ ಜಿಲ್ಲೆಯ 5 ಕ್ಷೇತ್ರಗಳು ಒಟ್ಟು 13 ಕ್ಷೇತ್ರಗಳಲ್ಲೂ ಚುನಾವಣೆಗಳು ನಡೆದಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೇ 15ರಂದು ಮತ ಎಣಿಕಾ ಕಾರ್ಯ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಅಭ್ಯರ್ಥಿಗಳ ಮತಪೆಟ್ಟಿಗಳನ್ನು ಶನಿವಾರ ರಾತ್ರಿ ತಂದು ಮತ ಎಣಿಕೆ ಕೇಂದ್ರ ಬೊಂದೇಲ್ನಲ್ಲಿರುವ ಮಹಾತ್ಮಗಾಂಧಿ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ತಂದಿರಿಸಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಅಲ್ಲದೆ ಕಾಲೇಜಿನ ಹೊರಭಾಗದಿಂದ ಒಳಹೋಗುವ ಎಲ್ಲಾ ವ್ಯಕ್ತಿಗಳನ್ನು ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿದೆ. ಅರೆಸೇನಾ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಮತ ಎಣಿಕಾ ಕೇಂದ್ರದ ಸುತ್ತ ಅವರು ಹದ್ದಿನಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ. ಮತ ಎಣಿಕಾ ಕಾರ್ಯಕ್ಕೆ ನಾಳೆ ಒಂದೇ ದಿನ ಬಾಕಿ ಇದ್ದು, ಜಿಲ್ಲೆಯ ಮತದಾರರ ಸಹಿತ ಅಭ್ಯರ್ಥಿಗಳು ಆತಂಕಗೊಂಡಿದ್ದು, ಮತ ಎಣಿಕಾ ಕಾರ್ಯಕ್ಕೆ ಕಾಯುತ್ತಿದ್ದಾರೆ.