ಮಂಗಳೂರು,ಮೇ13: ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯಾದ್ಯಂತ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಬೇರೆ ಕಡೆಗಳಲ್ಲಿ ಮತದಾನಕ್ಕೆ ಹೋಗಬೇಕಾದ ಮತದಾರರು ಸಕಾಲಕ್ಕೆ ಬಸ್ ಸಿಗದೇ ತೊಂದರೆಗೊಳಗಾಗಿ ಪರದಾಡಿದರು. ದೂರದೂರಿಗೆ ತೆರಳಬೇಕಾದ ಪ್ರಯಾಣಿಕರು ಮಂಗಳೂರಿನ ಬಿಜೈಯಲ್ಲಿರುವ ಕೆಎಸ್ಆರ್ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಮತಗಟ್ಟೆಗಳಿಗೆ ತೆರಳುವುದಕ್ಕೆ ನೇರ ಬಸ್ ಸೇವೆ ಸಿಗದೇ ತಾಸುಗಟ್ಟಲೆ ಕಾದು ನಿಂತು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕಿದ್ದಾರೆ.
ಧರ್ಮಸ್ಥಳ, ಬೆಳ್ತಂಗಡಿ, ಚಿಕ್ಕಮಗಳೂರು, ಮೂಡಿಗೆರೆ ಸೇರಿದಂತೆ ವಿವಿಧ ಪ್ರದೇಶದ ಮಂದಿ ಮತದಾನ ಮಾಡಲು ತಮ್ಮ ಊರುಗಳಿಗೆ ತೆರಳಲು ಪರದಾಡಿದರು. ನಗರದ ಖಾಸಗಿ ಸಿಟಿ ಬಸ್ ಸಂಚಾರ ಕೂಡಾ ಅಸ್ತವ್ಯವಸ್ಥಗೊಂಡಿತ್ತು. ಇನ್ನು ಚುನಾವಣಾ ಕರ್ತವ್ಯ ನಿಮಿತ್ತ ಬಸ್ಸುಗಳು ತೆರಳಿದ್ದು ಪ್ರಯಾಣಿಕರಿಗೆ ಸಹಜವಾಗಿಯೇ ತೊಂದರೆ ಉಂಟಾಗಿದೆ.