ಉಡುಪಿ, ಸೆ 27(DaijiworldNews/PY): ವೈಜ್ಞಾನಿಕ ಲಾಕ್ಡೌನ್ನಿಂದ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣವಾಗದೇ ವಲಸೆ ಕಾರ್ಮಿಕರ ಮಾರಣಹೋಮಕ್ಕೆ ಕಾರಣವಾಯಿತು. ಇದು ಸಾಂಕ್ರಾಮಿಕ ರೋಗವನ್ನು ಗಂಭೀರವಾಗಿ ಪರಿಗಣಿಸಿದೆ. ಅದನ್ನು ತಮ್ಮ ರಾಜಕೀಯ ನಡೆ ಎಂಬುದಾಗಿ ಪರಿಗಣಿಸಿದ ಕೇಂದ್ರ ಸರಕಾರ ಗಂಟೆ ಬಡಿಯಿರಿ, ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿಸಿ ಕೊರೊನಾ ಓಡಿಸಿ ಎಂದು ಗಿಮಿಕ್ಸ್ಗಳಿಗೆ ಒತ್ತಾಸೆ ಕೊಟ್ಟಿದ್ದರಿಂದ ಇಂದು ಈ ರೋಗ ಹರಡುವಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೆ ದೇಶ ಬರುವಂತಾಯಿತು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.



ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರೋಗ ನಿಯಂತ್ರಣ ಇನ್ನೊಂದು ಅಕ್ರಮ ದಂಧೆಗಳಿಗೆ ದಾರಿ ಮಾಡಿ ಕೊಟ್ಟಿತು. ಆದರೂ ಈ ದುರಿತ ಕಾಲದಲ್ಲಿ ಜನರ ಬದುಕಿಗೆ ಸಹಾಯವಾದುದು ಕಾಂಗ್ರೆಸ್ ಸರಕಾರ ಜಾರಿಗೆ ತಂದ ಆಹಾರ ಭದ್ರತೆ ಕಾನೂನು, ನರೇಗಾ ಕಾನೂನು ಮತ್ತು ಕಾಂಗ್ರೆಸ್ ಕಾಲದಲ್ಲಿ ನೇಮಕವಾದ ಆಶಾ ಕಾರ್ಯಕರ್ತರು ಎಂಬುದನ್ನು ವಿರೋಧ ಪಕ್ಷಗಳು ಮರೆಯಬಾರದು ಎಂದು ತಿಳಿಸಿದರು.
ಈ ಲಾಕ್ಡೌನ್ ಸಂದರ್ಭದಲ್ಲಿ ಮರಳು ದಂಧೆ, ಅಕ್ರಮ ಮರ ಸಾಗಾಟ ಮತ್ತು ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ರಚನೆಯಂತ ಅಕ್ರಮಗಳಲ್ಲಿ ಬಿಜೆಪಿಯ ಮುಖಂಡರು ನಿರತರಾಗಿದ್ದದು ನಾಚಿಕೆಗೇಡಿನ ಸಂಗತಿ. ಕೊರೊನಾ ಮಹಾಮಾರಿಯೊಂದಿಗೆ ಈಗ ನೆರೆಯ ಹಾವಳಿ ಜನರ ಬದುಕನ್ನು ದುಸ್ತರ ಗೊಳಿಸಿದೆ. ಈ ನೆರೆ ಪರಿಹಾರವನ್ನು ಶೀಘ್ರದಲ್ಲಿ ಫಲಾನುಭವಿಗಳಿಗೆ ವಿತರಿಸಬೇಕು ಇಲ್ಲವಾದರೆ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಸರಕಾರವನ್ನು ಎಚ್ಚರಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದ ಮೂಲ ಕೇಂದ್ರ ಪಂಚಾಯತ್, ಇದು ಸರಕಾರವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ಗ್ರಾಮ ಪಂಚಾಯತ್ ಚುನಾವಣೆ ಎಲ್ಲಾ ಚುನಾವಣೆಗಳಿಗಿಂತ ಭಿನ್ನ ಮತ್ತು ಮಹತ್ತರವಾದುದು. ಹಾಗಾಗಿ ಕಾರ್ಯಕರ್ತರು ಇಂದಿನಿಂದಲೇ ಪಂಚಾಯತ್ ಚುನಾವಣೆಗೆ ಸಜ್ಜಾಗಬೇಕು. ಇಂದಿನ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೇ ಕಾಂಗ್ರೆಸ್ ಸರಕಾರ ಮಾಡಿದ ಕಾಮಗಾರಿಗಳನ್ನು ಉದ್ಘಾಟಿಸುತ್ತಾ ಕಾಲ ಕಳೆಯುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲಾಗದ ಸರಕಾರ ಅದನ್ನು ಅಕ್ರಮವಾಗಿ ಹಣ ಗಳಿಸುವ ದಂದೆಯನ್ನಾಗಿ ಪರಿವರ್ತಿಸಿದೆ ಎಂದು ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ವೀಕ್ಷಕರಾದ ನೀರೆ ಕೃಷ್ಣ ಶೆಟ್ಟಿಯವರು ನುಡಿದರು.
ವೇದಿಕೆಯಲ್ಲಿ ಕಾಪು ಉತ್ತರ ವಲಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಚರಣ್ ವಿಠಲ್, ಇಂಟಕ್ ಅಧ್ಯಕ್ಷ ಉಮೇಶ್ ಕಾಂಚನ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಎಲ್ಲರನ್ನು ಸ್ವಾಗತಿಸಿದರು. ಮಾಜಿ ಅಧ್ಯಕ್ಷಉದ್ಯಾವರ ನಾಗೇಶ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಅಗಲಿದ ಮಹಾನ್ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆತ್ಮಕ್ಕೆ ಚಿರ ಶಾಂತಿ ಕೋರಿ ಮೌನ ಪ್ರಾರ್ಥನೆ ಜರಗಿತು.
ಈ ಸಭೆಯಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಸ್ವಯಂ ಸೇವಕರಿಗೆ ಕಿಟ್ ಅನ್ನು ವಿತರಿಸಲಾಯಿತು.