ಬೆಂಗಳೂರು,ಮೇ13: ದಲಿತ ಮುಖ್ಯಮಂತ್ರಿ ಆಗುವುದಾದರೆ ಸಿಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ, ಅದನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ದಲಿತ ಸಿಎಂ ಆಗುವ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗುವುದು. ಇನ್ನೂ ಜೆಡಿಎಸ್-ಬಿಜೆಪಿ ಒಪ್ಪಂದದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಕುಮಾರಸ್ವಾಮಿ ಅವರು ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳಿದ್ದರೆ. ಆದರೆ ಈ ಬಾರಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದರು.
ಈ ಬಾರಿ ಜನರು ಅಧಿಕಾರವನ್ನು ಮತ್ತೆ ನಮಗೇ ನೀಡಲಿದ್ದಾರೆ. ಸಮ್ಮಿಶ್ರ ಸರಕಾರ ಮಾಡುವ ಮಾತಿಲ್ಲ.ರಾಜ್ಯದ ಜನರಿಗೆ ತಿಳಿದಿದೆ ಯಾರನ್ನು ಆಯ್ಕೆ ಮಾಡಬೇಕೆಂದು. ಮುಂದಿನ ಬಾರಿಯು ಜನರು ನಮಗೆ ಆಶೀರ್ವಾದ ಮಾಡಲಿದ್ದಾರೆ. ನಾವು ಸಮೀಕ್ಷೆಯನ್ನು ಮಾತ್ರವಲ್ಲ ನಮ್ಮ ಪದಾಧಿಕಾರಿಗಳ ವರದಿ ಆಧರಿಸಿ ಈ ಬಾರಿ ಅಧಿಕಾರಕ್ಕೆ ಬರಲಿದ್ದೇವೆ ಮಾತ್ರವಲ್ಲದೆ 113 ಸ್ಥಾನ ದಾಟಲಿದ್ದೇವೆ. ಇನ್ನೂ ಯಡಿಯೂರಪ್ಪ 17ನೇ ತಾರೀಕು ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದಿದ್ದಾರೆ, ನಾನು ಅವರ ಆಸೆಗೆ ತಣ್ಣೀರೆರೆಚುವುದಿಲ್ಲ. ಆದರೆ ಅದು ಅವರಿಂದಾಗದ ಮಾತು ಎಂದವರು ಟೀಕಿಸಿದ್ದಾರೆ.