ಮಂಗಳೂರು, ಸೆ 27(DaijiworldNews/PY): ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಬಳಿಯ ಬೆಳ್ಳೇರಿಯ ಮನೆಯಲ್ಲಿ ಮಹಿಳೆಯೋರ್ವರ ಹತ್ಯೆ ಮಾಡಲಾಗಿದ್ದು, ಕಳ್ಳತನಕ್ಕೆ ಬಂದವರು ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಘಟನೆಯ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳೆಪುಣಿ ಬೆಳ್ಳೇರಿ ನಿವಾಸಿ ಕುಸುಮಾ (55) ಮೃತಪಟ್ಟವರು. ಇವರು ಅವಿವಾಹಿತರಾಗಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಕುಸುಮಾ ಅವರು ಬೆಳ್ಳೇರಿಯ ಗೋವಿಂದ ಪುರುಷ ಅವರ ಆರು ಮಂದಿ ಮಕ್ಕಳಲ್ಲಿ ಕಿರಿಯವರು. ಕುಸುಮಾ ಅವರು ಬಿಎಎಟ್ ಪದವೀಧರರಾಗಿದ್ದು, ಪಿತ್ರಾರ್ಜಿತ ಆಸ್ತಿಯಲ್ಲಿ ಬಂದ ತೋಟದಿಂದ ಬರುವ ಆದಾಯದಿಂದ ಬದುಕು ನಡೆಸುತ್ತಿದ್ದರು. ಇವರು ಮನೆಯಿಂದ ಹೊರ ಬರುತ್ತಿರಲಿಲ್ಲ.
ಕುಸುಮಾ ಅವರ ಸಹೋದರ-ಸಹೋದರಿಯರಿಗೆ ವಿವಾಹವಾಗಿದ್ದು, ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಮೃತ ಕುಸುಮಾ ಅವರು ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆ ಅನುಮಾಸ್ಪದವಾಗಿ ಮೃಪಟ್ಟ ಒಂದು ದಿನದ ನಂತರ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಕುಸುಮಾ ಅವರಿಗೆ ಅವರ ಸಹೋದರ ಕರೆ ಮಾಡಿದ್ದ ಸಂದರ್ಭ ಕರೆ ತೆಗೆಯಲಿಲ್ಲ. ಈ ವಿಷಯವನ್ನು ಅವರ ಹಳೆ ಮನೆಯಲ್ಲಿ ಬಾಡಿಗೆಗಿದ್ದವರಿಗೆ ತಿಳಿಸಿದಾಗ, ಅವರ ಮನೆಗೆ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯ ಜೊತೆ ಕುಸುಮಾ ಅವರ ಮನೆಗೆ ತೆರಳಿದ್ದ ಸಂಧರ್ಭ ಘಟನೆ ತಿಳಿದುಬಂದಿದೆ.
ಮನೆಯ ಗ್ಯಾಸ್ ಒಲೆಯ ಬಳಿ ಬಟ್ಟೆ ಅರ್ಧ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಗ್ಯಾಸ್ ಒಲೆಯ ಬಳಿ ಪಾತ್ರೆಯಲ್ಲಿ ಅಕ್ಕಿ ತೊಳೆದಿಟ್ಟ ಸ್ಥಿತಿಯಲ್ಲಿ ಇದ್ದು, ಕಿಟಕಿಗಳ ಪರದೆ ಹಾಗೂ ನೆಲದ ಮೇಲೆ ಯಾವುದೋ ವಸ್ತು ಸುಟ್ಟ ರೀತಿಯಲ್ಲಿ ಕಂಡುಬಂದಿದೆ. ಎಲ್ಲದ್ದಕ್ಕಿಂತ ಮುಖ್ಯವಾಗಿ ಮನೆಯ ಮಹಡಿಯಲ್ಲಿದ್ದ ಕೋಣೆಯಲ್ಲಿದ್ದ ಕಪಾಟಿನಲ್ಲಿದ್ದ ವಸ್ತ್ರ ಚೆಲ್ಲಾಪಿಲ್ಲಿಯಾಗಿ ಹರಡಿತ್ತು.
ಕಳ್ಳತನಕ್ಕೆ ಬಂದವರು ಮಹಿಳೆಯನ್ನು ಹತ್ಯೆ ಮಾಡಿರಬಹುದೇ ಎನ್ನುವ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಬಟ್ಟೆ ಕಳಚಿರುವ ಕಾರಣ ಕಳ್ಳತನಕ್ಕೆ ಬಂದವರು ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.