ಉಡುಪಿ, ಸೆ. 27 (DaijiworldNews/MB) : ಉಡುಪಿಯ ಪ್ರವಾಸಿ ಸ್ಥಳಗಳ ಅರಿವಿಲ್ಲದೆ ಗೋವಾದ ಹೆಚ್ಚಿನ ಪ್ರವಾಸಿಗರು ಮಂಗಳೂರಿನತ್ತ ಸಾಗುತ್ತಾರೆ. ಅವರು ಉಡುಪಿಯ ಸೌಂದರ್ಯವನ್ನು ಆನಂದಿಸಲು ಇಲ್ಲಿ ನಿಲ್ಲುವಂತಹ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ನಾವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಕುರಿತ ದಾಖಲೆ ಸಂಗ್ರಹ ಅಂತಿಮ ಹಂತದಲ್ಲಿದ್ದು ಇದು ಅಂತಿಮಗೊಂಡ ಬಳಿಕ ಉಡುಪಿ ಜಿಲ್ಲೆಗೆ ಪ್ರವಾಸೋದ್ಯಮ ಜಿಲ್ಲೆಯಾಗಿ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ನಾವು ಆ ದಾಖಲೆಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸುವ ಉದ್ದೇಶ ನಮ್ಮದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಹೇಳಿದರು.

















ಸೆಪ್ಟೆಂಬರ್ 27 ರ ಭಾನುವಾರ ಮಲ್ಪೆ ಬೀಚ್ನಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ನೆಹರೂ ಯುವ ಕೇಂದ್ರ ಉಡುಪಿ, ಕರಾವಳಿ ಪ್ರವಾಸೋದ್ಯಮ ಸಂಘಗಳು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನ ಜಂಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀಚ್ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ನಾವು ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ವಾತಾವರಣ ಮತ್ತು ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದು ಹೇಳಿದರು.
ಪಡುಬಿದ್ರಿ ಬೀಚ್ 10 ಅಂಕಗಳಲ್ಲಿ 8 ಅಂಕಗಳನ್ನು ಪಡೆದಿದೆ. ಎರಡು ಅಂತರರಾಷ್ಟ್ರೀಯ ನ್ಯಾಯಾಧೀಶರು ತೀರ್ಪಿನಲ್ಲಿದ್ದರು. ಈ ಬೀಚ್ನಲ್ಲಿನ ವ್ಯವಸ್ಥೆಯ ಬಗ್ಗೆ 10 ಅಂಕಗಳಲ್ಲಿ 10 ಅಂಕವನ್ನೂ ಗಳಿಸಿದರೆ ಬೀಚ್ಗೆ ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಯುತ್ತದೆ. ಬೀಚ್ ಈಗಾಗಲೇ ನೀಲಿ ಧ್ವಜ ಗುರುತಿಸುವಿಕೆಯನ್ನು ಪಡೆದುಕೊಂಡಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಡಿಸಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು, ಕರಾವಳಿ ಪ್ರದೇಶದ ಕಡಲತೀರಗಳು ಇತರ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ನಮಗೆ ಸಾಕಷ್ಟು ಅವಕಾಶಗಳಿವೆ, ಸಂಪನ್ಮೂಲಗಳಿವೆ ಆದರೆ ದೂರದೃಷ್ಟಿಯ ಕೊರತೆಯಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಈ ಎರಡು ಜಿಲ್ಲಾಡಳಿತವು ಹಬ್ಗಳು, ರೆಸಾರ್ಟ್ಗಳ ಸ್ಥಾಪನೆ ಮೂಲಕ ಪ್ರವಾಸಿ ಸ್ಥಳಗಳನ್ನು ಸುಧಾರಿಸುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯಂದು ಸ್ವಚ್ಛತಾ ಪಕ್ವಾಡ್ ಅಭಿಯಾನವನ್ನು ಆಯೋಜಿಸಲಾಗಿದ್ದು ಬೀಚ್ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಸಿಇಒ ಪ್ರೀತಿ ಗೆಹ್ಲೋಟ್, ಎಡಿಸಿ ಸದಾಶಿವ್ ಪ್ರಭು, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಾಕರ್ ಬಾಬು, ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಪ್ರವಾಸೋದ್ಯಮ ವಿಭಾಗದ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಮತ್ತು ಇತರರು ಉಪಸ್ಥಿತರಿದ್ದರು.