ಮಂಗಳೂರು, ಸೆ 27(DaijiworldNews/PY): ಮೊಬೈಲ್ ಕದ್ದ 105 ನಿಮಿಷದಲ್ಲಿ ನಗರದ ಪೊಲೀಸರು ಕಳ್ಳತನ ಪ್ರಕರಣವನ್ನು ಬೇಧಿಸಿದ್ದು, ಕಳ್ಳರಿಂದ 11 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರಂಗಲ್ಪಾಡಿಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾರ್ಮಿಕರು ಮಧ್ಯಾಹ್ನದ ಸಂದರ್ಭ ಮಲಗಿದ್ದಾಗ ಮೊಬೈಲ್ಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಕಾರ್ಮಿಕರು ಶನಿವಾರ ಸಂಜೆ 5 ಗಂಟೆಗೆ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳೂರು ಉತ್ತರ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಬಿ, ಸಬ್ ಇನ್ಸ್ಪೆಕ್ಟರ್ಗಳಾದ ಗುರುಕಾಂತಿ ಹಾಗೂ ನಾಗರಾಜ್ ಮುಖ್ಯ ಪೇದೆಗಳಾದ ಭರತ್ ಹಾಗೂ ವಾಲೆಂಟೈನ್ ಡಿಸೋಜಾ ಹಾಗೂ ತಿಪ್ಪದೇರಪ್ಪ ಅವರನ್ನೊಳಗೊಂಡ ಪೊಲೀಸ್ ತಂಡವು ಕಾರ್ಯಪ್ರವೃತ್ತವಾಗಿದ್ದು, ಸಂಜೆ ಸುಮಾರು 6.45 ಕ್ಕೆ ನಗರದ ಲಾಡ್ಜ್ನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗ್ರೆ ನಿವಾಸಿಗಳಾದ ಮೊಹಮ್ಮದ್ ಸುಹೈಲ್, ಮೊಹಮ್ಮದ್ ಸರ್ಫ್ರಾಜ್, ಮೊಹಮ್ಮದ್ ಸಫ್ವಾನ್ ಬಂಧಿತ ಆರೋಪಿಗಳು. ಮೊಹಮ್ಮದ್ ಸಫ್ವಾನ್ ವಿರುದ್ದ ಈಗಾಗಲೇ ಎರಡು ಕಳ್ಳತನದ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳಿಂದ ಎರಡು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕ್ಷಿಪ್ರ ಕಾರ್ಯಚರಣೆ ನಡೆಸಿರುವ ಬಗ್ಗೆ ಪೊಲೀಸರನ್ನು ಕಮೀಷನರ್ ಶ್ಲಾಘಿಸಿದ್ದಾರೆ.