ಮಂಗಳೂರು, ಸೆ. 27 (DaijiworldNews/MB) : ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ತರಗತಿಗಳು ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರು, "ಯುಜಿಸಿ ನೀಡಿದ ನಿರ್ದೇಶನದ ಪ್ರಕಾರ, ನವೆಂಬರ್ 1 ರಿಂದ ತರಗತಿಗಳನ್ನು ಪ್ರಾರಂಭಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿದ್ದು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತವೆ. ಅಕ್ಟೋಬರ್ 20 ರ ಮೊದಲು ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ನವೆಂಬರ್ 1 ರಿಂದಲೇ ಸ್ನಾತಕೋತ್ತರ ಕೋರ್ಸ್ಗಳ ತರಗತಿಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.
"ಈ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಮಾಡಲಾಗುವುದು. ಆದರೆ ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಕೊರೊನಾ ಪರಿಸ್ಥಿತಿಯನ್ನು ನಾವು ಪರಿಶೀಲಿಸುತ್ತೇವೆ. ಬಳಿಕ ತರಗತಿಗಳ ಆರಂಭಕ್ಕೆ ಅನುಮತಿ ಪಡೆಯುತ್ತೇವೆ" ಎಂದು ಮಾಹಿತಿ ನೀಡಿದರು.
"ಉತ್ತರ ಪತ್ರಿಕೆಗಳ ಡಿಜಿಟಲೀಕರಣ ಮತ್ತು ಡಿ-ಕೇಂದ್ರೀಕೃತ ಮೌಲ್ಯಮಾಪನವನ್ನು ಮಾಡಲು ವಿಶ್ವವಿದ್ಯಾಲಯವು ಸಜ್ಜಾಗಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ಮೊದಲ ಸೆಮಿಸ್ಟರ್ ತರಗತಿಗಳು ನವೆಂಬರ್ 1 ರಿಂದ ಪ್ರಾರಂಭವಾಗಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾಲ್ ಈ ಹಿಂದೆ ಟ್ವೀಟ್ ಮಾಡಿದ್ದರು.