ಬೆಂಗಳೂರು, ಮೇ 14: ರಾಜ್ಯದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ರಾಜ್ಯದ ಗ್ರಾಹಕರಿಗೆ, ವಿದ್ಯುತ್ ದರ ಏರಿಕೆಯ ಶಾಕ್ ನೀಡಿದೆ. ಆಯೋಗವು ಸೋಮವಾರ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದ್ದು, ಪ್ರತಿ ಯುನಿಟ್ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 38 ಪೈಸೆಯಷ್ಟು, ಇತರ ಹೆಸ್ಕಾಂ ವ್ಯಾಪ್ತಿಯಲ್ಲಿ 30 ಪೈಸೆಯಷ್ಟು ಹೆಚ್ಚಿಸಲಾಗಿದೆ. ವಿವಿಧ ಹಂತಗಳಲ್ಲಿ 25ರಿಂದ 60 ಪೈಸೆಯಷ್ಟು ಹೆಚ್ಚಿಸಲಾಗಿದೆ ಎಂದು ಕೆಇಆರ್ಸಿ ಅಧ್ಯಕ್ಷ, ಎಂ.ಕೆ. ಶಂಕರಲಿಂಗೇಗೌಡ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತದೆ, ಏಪ್ರಿಲ್ ನಿಂದ ಜಾರಿಗೆ ಬರುತ್ತದೆ. ಆದರೆ ಈ ವರ್ಷ ವಿಧಾನಸಭೆ ಚುನಾವಣೆ ಇದ್ದುದರಿಂದ ವಿದ್ಯುತ್ ದರ ಏರಿಕೆ ಮಾಡಿರಲಿಲ್ಲ. ಅಲ್ಲದೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಯೋಗ, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಬೆಲೆ ಏರಿಕೆ ಘೋಷಣೆಯನ್ನು ತಡೆಹಿಡಿದಿದ್ದು, ಇದೀಗ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದೆ. 2017ರ ಡಿಸೆಂಬರ್ನಲ್ಲೇ ಎಲ್ಲ ಎಸ್ಕಾಂಗಳು (ವಿದ್ಯುತ್ ಸರಬರಾಜು ಕಂಪನಿಗಳು) ಪ್ರತಿ ಯೂನಿಟ್ ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಅದರನ್ವಯವೇ ದರ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ 2018ರ ಏಪ್ರಿಲ್ ತಿಂಗಳಿನಿಂದಲೇ ಪೂರ್ವಾನ್ವಯ ಆಗಲಿದೆ. ಕಳೆದ ವರ್ಷ ಶೇ 8ರಷ್ಟು ಅಂದರೆ, ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ ಮಾಡಲಾಗಿತ್ತು.