ಅಭಿಜಿತ್ ಎನ್ ಕೊಲ್ಪೆ
ಮಂಗಳೂರು, ಸೆ. 28 (DaijiworldNews/MB) : ಈ ದೇಶದಲ್ಲಿ ಕೊರೊನಾ ಸಾಂಕ್ರಾಮಿಕವು ಪ್ರಕರಣಗಳು ಕಂಡು ಬಂದ ಆರಂಭದಲ್ಲೇ ಸರ್ಕಾರವು ಜನರು ತಮ್ಮನ್ನು ಸುರಕ್ಷಿತವಾಗಿರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದೆ. ಆದರೆ ಈ ನಡುವೆ ಈ ಮಾಸ್ಕ್ಗಳ ವಿಲೇವಾರಿ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರು ಬಳಸಿದ ಮಾಸ್ಕ್ಗಳನ್ನು ಎಲ್ಲೆಂದರಲ್ಲಿ ಎಸೆದಿರುವುದು ನಗರದಲ್ಲಿ ಕಂಡು ಬರುತ್ತಿದೆ. ನಗರದ ಬೀದಿಯಲ್ಲಿ ಮಾಸ್ಕ್ಗಳು ಬಿದ್ದಿರುವುದು ನಾವು ಈಗ ಗಮನಿಸಬಹುದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಈ ಮಾಸ್ಕ್ಗಳನ್ನು ಎಸೆಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಬಳಸಿದ ಮಾಸ್ಕ್ಗಳ ವಿಲೇವಾರಿ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದು ತೀರಾ ಅಗತ್ಯವಾಗಿದೆ. ಮಾಸ್ಕ್ ವಿಲೇವಾರಿ ಮಾಡಲು ಅದ್ದರದ್ದೇ ಆದ ಕೆಲವು ಕ್ರಮಗಳಿದ್ದು ಅವುಗಳನ್ನು ಕಸದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದನ್ನು ತಡೆಹಿಡಿಯಬೇಕಾಗಿದೆ.
ಈ ಬಗ್ಗೆ ದಾಯ್ಜಿವಲ್ಡ್ ಮಾಧ್ಯಮದೊಂದಿಗೆ ಮಾತನಾಡಿದ ಅತ್ತಾವರ ಕೆಎಂಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ ಅವರು, "ಆಸ್ಪತ್ರೆಗಳ ಒಳಗೆ ಮುಖವಾಡ ವಿಲೇವಾರಿಯನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಪ್ರಕಾರವಾಗಿ ಸರಿಯಾದ ರೀತಿಯಲ್ಲಿ ನಡೆಸಲಾಗುತ್ತದೆ. ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಮನೆಯಲ್ಲಿ ನಾವು ಬಟ್ಟೆಯ ಮಾಸ್ಕ್ಗಳನ್ನು ಪ್ರತಿದಿನ ತೊಳೆದು ಬಳಸಬೇಕಾಗಿದೆ. ಮಾಸ್ಕ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು, ಇದು ಬಹಳ ಕೆಟ್ಟ ಅಭ್ಯಾಸವಾಗಿದೆ. ಯಾರಾದರೂ ಅದನ್ನು ಮುಟ್ಟಿದರೆ ಸೋಂಕು ಹರಡುವ ಸಾಧ್ಯತೆಗಳು ಇರುತ್ತದೆ. ಚಿಂದಿ ಆಯುವವರು, ಭಿಕ್ಷುಕರು ಕೂಡಾ ಇದನ್ನು ಮರುಬಳಕೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಮಾಸ್ಕ್ಗಳನ್ನು ಶುಚಿಗೊಳಿಸಿ 72 ಗಂಟೆಗಳ ಕಾಲ ಮನೆಯಲ್ಲೇ ಇರಿಸಿ, ಬಳಿಕ ಪಾಲಿಕೆಯ ಕಸವಿಲೇವಾರಿ ವಾಹನ ಬಂದಾಗ ನೀಡಿ. ಅದನ್ನು ಎಂದಿಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬೇಡಿ. ಇನ್ನು ಈ ಮಾಸ್ಕ್ಗಳ ಮರುಬಳಕೆಯನ್ನು ನೀವು ತಡೆಯಬೇಕಾದರೆ ನೀವು ಇದನ್ನು ಪಾಲಿಕೆಗೆ ನೀಡುವ ಮುನ್ನ ಕತ್ತರಿಸಿ ನೀಡಬಹುದು ಎಂದು ಸಲಹೆ ನೀಡಿದ್ದಾರೆ.
"ಮಾಸ್ಕ್ಗಳು ಮಣ್ಣಿಗೆ ಉಂಟು ಮಾಡುವ ಪರಿಣಾಮದ ಬಗ್ಗೆ ನಮಗೆ ಸರಿಯಾದ ಮಾಹಿತಿಯಿಲ್ಲ. ಆದರೆ ಸಾಮಾನ್ಯವಾಗಿ, ಮಾಸ್ಕ್ಗಳನ್ನು ಸರಿಯಾಗಿ ಬಳಸುವುದು ಹೇಗೆ ಎಂದು ಜನರಿಗೆ ತಿಳಿದಿಲ್ಲ. ಮಾಸ್ಕ್ಗಳನ್ನು ಧರಿಸಿ ಅದನ್ನು ಗಲ್ಲದ ಮೇಲೆಯೇ ಇರಿಸಿಕೊಳ್ಳುವುದನ್ನು ನಾವು ನಗರದಲ್ಲಿ ಕಾಣುತ್ತೇವೆ. ಕೇವಲ 10 ರಿಂದ 15 ಪ್ರತಿಶತದಷ್ಟು ಜನರು ಮಾತ್ರ ಮಾಸ್ಕ್ ಧರಿಸುತ್ತಾರೆ. ಬಳಸಿದ ಬಳಿಕ ಅದನ್ನು ಲ್ಲಿ ಬೇಕಾದರೂ ಎಸೆಯುತ್ತಾರೆ ಎಂದು ಹೇಳಿದರು.
ಒದ್ದೆಯಾದ ಮಾಸ್ಕ್ಗಳ ಬಳಕೆ ಕೂಡಾ ಹೆಚ್ಚು ಅಪಾಯಕಾರಿಯಾಗಿದೆ. ಒದ್ದೆಯಾದ ಮಾಸ್ಕ್ ಧರಿಸುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಮಳೆಯ ಸಂದರ್ಭದಲ್ಲಿ ಹೊರಗಡೆ ಓಡಾಡುವಾದ ಮಾಸ್ಕ್ ಒದ್ದೆಯಾಗಬಹುದು. ಇದು ಬಹಳ ಅಪಾಯಕಾರಿಯಾಗಿದೆ. ಒದ್ದೆಯಾದ ಮಾಸ್ಕ್ ಧರಿಸುವುದರಿಂದ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಅವರು ದಾಯ್ಜಿವಲ್ಡ್ನೊಂದಿಗೆ ಮಾತನಾಡಿ, "ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡವನ್ನು ಎಸೆಯುವುದು ಹೆಚ್ಚು ಅಪಾಯಕಾರಿ. ಕೊರೊನಾ ಪಾಸಿಟಿವ್ ಆಗಿರುವ ಜನರು ತಮ್ಮ ಮಾಸ್ಕ್ಗಳನ್ನು ಸಾರ್ವಜನಿಕವಾಗಿ ಎಸೆದರೆ ಅದರಿಂದಾಗಿ ಕೊರೊನಾ ಸೋಂಕು ಹರಡುತ್ತದೆ. ಮಾಸ್ಕ್ಗಳನ್ನು ರಸ್ತೆಗಳಲ್ಲಿ ಎಸೆಯದೆ ಅದನ್ನು ಸರಿಯಾದ ಕ್ರಮವಾಗಿ ವಿಲೇವಾರಿ ಮಾಡಬೇಕಾಗಿದೆ. ಒಂದು ಕುಟುಂಬವು ಕೊರೊನಾ ಸೋಂಕಿಗೆ ಒಳಪಟ್ಟಿದ್ದರೆ ಅವರು ಬಳಸಿದ ಮಾಸ್ಕ್ಗಳ ವಿಲೇವಾರಿಗಾಗಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
"ಮಾಸ್ಕ್ನ್ನು ಸುಡುವುದು, ಬ್ಲೀಚಿಂಗ್ ದ್ರಾವಣದಲ್ಲಿ ಇರಿಸುವುದು ಮಾಸ್ಕ್ ವಿಲೇವಾರಿಯ ಉತ್ತಮ ವಿಧಾನವಾಗಿದೆ ಎಂದು ಬಾಯರಿ ಅವರು ತಿಳಿಸಿದ್ದಾರೆ.
ಮಾಲಿನ್ಯ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಮನೆಗಳಲ್ಲಿರುವ ತ್ಯಾಜ್ಯ ಮಾಸ್ಕ್ಗಳನ್ನು, ಕೈಗವಸುಗಳನ್ನು ಕನಿಷ್ಠ 72 ಗಂಟೆಗಳ ಕಾಲ ಕಾಗದದ ಚೀಲದಲ್ಲಿ ಇರಿಸಬೇಕು. ಬಳಿಕ ಅದರ ಮರುಬಳಕೆಯನ್ನು ತಪ್ಪಿಸಲು ಮಾಸ್ಕ್ಗಳನ್ನು ಕತ್ತರಿಸಿ ಅದನ್ನು ವಿಲೇವಾರಿ ಮಾಡಬೇಕಾಗಿದೆ. ವಾಣಿಜ್ಯ ಸಂಸ್ಥೆಗಳು, ಶಾಪಿಂಗ್ ಮಾಲ್ಗಳು, ಕಚೇರಿ ಇತ್ಯಾದಿಗಳಲ್ಲಿ ಬಳಸದ ಪಿಪಿಇ ಕಿಟ್ಗಳನ್ನು ಮೂರು ದಿನಗಳವರೆಗೆ ಪ್ರತ್ಯೇಕವಾಗಿರಿಸಿ ಬಳಿಕ ಅದನ್ನು ಚೂರು ಚೂರಾಗಿ ಕತ್ತರಿಸಿ ಒಣ ಘನತ್ಯಾಜ್ಯವಾಗಿ ವಿಲೇವಾರಿ ಮಾಡಬೇಕು.