ಉಡುಪಿ, ಸೆ. 29 (DaijiworldNews/MB) : ಸತತ ಆರು ತಿಂಗಳಿನಿಂದ ಮುಚ್ಚಿದ್ದ ಶ್ರೀ ಕೃಷ್ಣ ಮಠದಲ್ಲಿ ಸೆಪ್ಟೆಂಬರ್ 28 ರಂದು ಮಧ್ಯಾಹ್ನದ ಬಳಿಕ ಶ್ರೀ ಕೃಷ್ಣ ದರ್ಶನ ಮಾಡಲು ಭಕ್ತರಿಗೆ ಮುಕ್ತ ಅವಕಾಶ ನೀಡಲಾಯಿತು. ಮೊದಲ ದಿನ ಸಾವಿರಾರು ಭಕ್ತರು ಕೃಷ್ಣ ದೇವರ ದರ್ಶನವನ್ನು ಪಡೆದು ಕೃತಾರ್ಥರಾದರು.











ಶ್ರೀಕೃಷ್ಣ ಮಠದಲ್ಲಿ, ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವದಕ್ಕಾಗಿ ಮಾಡಿದ ವಿಶೇಷ ದಾರಿಯನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥರು, ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರಿವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರೊಂದಿಗೆ ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.
ಇಂದಿನಿಂದ ಭಕ್ತಾದಿಗಳಿಗೆ ನಿಗದಿತ ಸಮಯದಲ್ಲಿ(ಮಧ್ಯಾಹ್ನ 2 ಘಂಟೆಯಿಂದ 5 ರ ತನಕ) ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸರಕಾರದ ಕೋವಿಡ್ 19 ಮಾರ್ಗಸೂಚಿಯಂತೆ ಭಕ್ತರಿಗೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆ ಹಾಗೂ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಯಿತು. ಆದರೆ ಯಾವುದೇ ಪ್ರಸಾದ, ವಿಶೇಷ ಪೂಜೆ ಹಾಗು ಅನ್ನಸಂತರ್ಪಣೆಗೆ ಅವಕಾಶವಿರಲಿಲ್ಲ. ಮುಂದಿನ ದಿನಗಳಲ್ಲಿ ಸಮಯ ಸಂದರ್ಭವನ್ನು ನೋಡಿಕೊಂಡು ಸೇವೆಯನ್ನು ಆರಂಭಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ. ಕರ್ನಾಟಕ ಬಂದ್ ನಡುವೆಯೂ ಸಾವಿರಾರು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನವನ್ನು ಪಡೆದರು.
ಶ್ರೀಕೃಷ್ಣ ಮಠದಲ್ಲಿ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ, ಭಕ್ತರು ದೇವರ ದೀಪಕ್ಕೆ ಹಾಕುತ್ತಿದ್ದ ಎಣ್ಣೆಯು ಕಲಬೆರಕೆ ಆಗದಿರಲಿ ಎಂಬ ದೃಷ್ಠಿಯಿಂದ ಎಣ್ಣೆಯ ಬದಲು ತಾವೇ ಮನೆಯಿಂದ ಎಳ್ಳು ತಂದು ಒಪ್ಪಿಸಬಹುದು ಅಥವ ಮಠದ ಕೌಂಟರಲ್ಲಿ ತೆಗೆದುಕೊಂಡು ದೇವರ ಮುಂಭಾಗದಲ್ಲಿ ಒಪ್ಪಸಿದಲ್ಲಿ ಅದನ್ನು ಗಾಣಕ್ಕೆ ಕೊಟ್ಟು ಶುದ್ಧ ಎಣ್ಣೆಯನ್ನೇ ದೇವರ ದೀಪಕ್ಕೆ ಅರ್ಪಿಸಬಹುದು ಎಂಬಂತೆ ಸಾಂಕೇತಿಕವಾಗಿ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರಿವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರುಗಳು ಪರ್ಯಾಯ ಶ್ರೀಪಾದರಿಗೆ ಒಪ್ಪಿಸಿದರು.