ಮಂಗಳೂರು, ಸೆ. 29 (DaijiworldNews/MB) : ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಬಗಂಬಿಲದ ಅಂಗನವಾಡಿಯು ಸುಮಾರು 26 ವರ್ಷಗಳ ಬಳಿಕ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ. ಹೊಸ ಅಂಗನವಾಡಿಯನ್ನು ಆಧುನಿಕವಾಗಿ ನಿರ್ಮಿಸಲಾಗಿದ್ದು ಪುಟಾಣಿಗಳು ತಮ್ಮ ಪುಟ್ಟ ಹೆಜ್ಜೆ ಮುಂದಿಟ್ಟು ಈ ಅಂಗನವಾಡಿಗೆ ತೆರಳಲು ಕುತೂಹಲದಿಂದ ಕಾಯುತ್ತಿದ್ದಾರೆ.

1989 ರಲ್ಲಿ ಸ್ಥಳೀಯರು ನಾಗರಿಕ ಸೇವಾ ಸಮಿತಿಯನ್ನು ರಚಿಸಿದ್ದರು. ಈ ಸಂಸ್ಥೆಗೆ ಕಟ್ಟಡದ ಅವಶ್ಯಕತೆ ಇತ್ತು. ಆ ಸಂದರ್ಭದಲ್ಲಿ ಯುನೆಸ್ಕೋ ಕೆಲವು ದಾನಿಗಳೊಂದಿಗೆ ಕೈಜೋಡಿಸಿ 53,391 ರೂ.ಗಳನ್ನು ಕಟ್ಟಡ ನಿರ್ಮಾಣಕ್ಕಾಗಿ ದಾನ ಮಾಡಿತು. ಆದರೆ ಬಳಿಕ ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣ ಪಡೆಯಲು ಸುಮಾರು 4 ಕಿ.ಮೀ ದೂರದಲ್ಲಿರುವ ದೇರಳಕಟ್ಟೆ ಅಥವಾ ಬಬ್ಬುಕಟ್ಟೆಗೆ ಹೋಗಬೇಕಾಗಿತ್ತು. ಆ ಸಂದರ್ಭದಲ್ಲಿ ಬಸ್ಗಳು ಲಭ್ಯವಿಲ್ಲದ ಕಾರಣ ಮಕ್ಕಳಿಗೆ ನಡೆಸುಕೊಂಡು ಹೋಗುವ ಆಯ್ಕೆ ಮಾತ್ರ ಕಣ್ಣೆದುರಿತ್ತು.
ಬಳಿಕ ಜನರು ಪ್ರಾಥಮಿಕ ಶಾಲೆಗೆ ಒತ್ತಡ ಹೇರಿದ್ದು 1994 ರಲ್ಲಿ ಸರ್ಕಾರವು ನಾಲ್ಕನೇ ತರಗತಿಯವರೆಗಿನ ಶಾಲೆಯನ್ನು ತೆರೆಯಲು ಅನುಮತಿ ನೀಡಿತು. ಆದರೆ ಯಾವುದೇ ಕಟ್ಟಡ ಇರಲಿಲ್ಲ. ಈ ಸಂದರ್ಭದಲ್ಲಿ ನಾಗರಿಕ ಸೇವಾ ಸಮಿತಿಯು ಶಾಲೆಗೆ ತನ್ನದೇ ಆದ ಕಟ್ಟಡವನ್ನು ನೀಡಲು ಮುಂದೆ ಬಂದಿತು. ಕೆಲವು ವರ್ಷಗಳ ನಂತರ, ಶಾಲೆ ನಿರ್ಮಾಣಕ್ಕಾಗಿ ಒಂದು ಎಕರೆ ಭೂಮಿ ಮಂಜೂರಾಗಿದ್ದು ಕಟ್ಟಡವನ್ನು ನಿರ್ಮಿಸಲಾಯಿತು. ಶಾಲೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಯಿತು. ಆದರೆ ಅಂಗನವಾಡಿ ಕೇಂದ್ರಕ್ಕೆ ಮಾತ್ರ ಮಾತ್ರ ಸ್ವತ ಕೊಠಡಿಯಿಲ್ಲದೆ ನಾಗರಿಕ ಸಮಿತಿ ಕಟ್ಟಡದಲ್ಲಿಯೇ ಉಳಿಯಿತು.
ಆದರೆ ಆ ಬಳಿಕವೂ ಅಂಗನವಾಡಿ ಕಾರ್ಯಕರ್ತೆ ಪುಷ್ಪಕುಮಾರಿಯವರು ಸಮಿತಿಯೊಂದಿಗೆ ಸೇರಿ ಅಂಗನವಾಡಿಗೆ ಸ್ವಂತ ಕಟ್ಟಡವನ್ನು ಪಡೆಯುವ ಪ್ರಯತ್ನ ಮಾಡಿದರು. ಆದರೆ ಅದು ಯಾವುದೇ ಫಲಶ್ರುತಿ ನೀಡಿರಲಿಲ್ಲ. ಅಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳವು ಇಲಾಖೆಯಿಂದ ಬರುತ್ತಿದ್ದರೂ ಕೂಡಾ ಸಮಿತಿಯು ಅಂಗನವಾಡಿಗೆ ಕಟ್ಟಡವನ್ನು ಉಚಿತವಾಗಿ ನೀಡಿತ್ತು.
ನಾಗರಿಕ ಸೇವಾ ಸಮಿತಿಯು ಕಳೆದ ವರ್ಷ ಅಂಗನವಾಡಿ ನಿರ್ಮಾಣಕ್ಕಾಗಿ ಎರಡೂವರೆ ಸೆಂಟ್ಸ್ ಭೂಮಿಯನ್ನು ದಾನ ಮಾಡಿದರೂ ಕೂಡಾ ಸರ್ಕಾರದಿಂದ ಯಾವುದೇ ಅನುದಾನ ಬರಲಿಲ್ಲ. ಬಳಿಕ ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅವರು ಈ ಕಟ್ಟಡ ನಿರ್ಮಾಣಕ್ಕಾಗಿ ಸಹಾಯ ಮಾಡುವಂತೆ ಕೋರಿ ಇನ್ಫೋಸಿಸ್ ಸಂಸ್ಥೆಯನ್ನು ಸಂಪರ್ಕಿಸಿದರು. ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣದ ಯೋಜನೆ ರೂಪಿಸಿ ಬಳಿಕ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಸುಮಾರು 26 ವರ್ಷಗಳಿಂದ ನಾಗರಿಕ ಸಮಿತಿ ಕಟ್ಟಡಗಳಲ್ಲಿದ್ದ ಅಂಗನವಾಡಿ ಕೇಂದ್ರವನ್ನು ಈಗ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪುಷ್ಪಕುಮಾರಿ ಅವರು ಈಗ ನಿವೃತ್ತರಾಗುತ್ತಿದ್ದು ಇದೀಗ ಅಂಗನವಾಡಿ ಸ್ವಂತ ಕಟ್ಟಡದಲ್ಲಿ ಆರಂಭವಾಗಲಿದೆ.
ಸರ್ಕಾರ ಮಾಡಬೇಕಾಗಿದ್ದ ಕಾರ್ಯವನ್ನು ಇನ್ಫೋಸಿಸ್ ಸಂಸ್ಥೆ ಮಾಡಿದೆ. ಸತೀಶ್ ಕುಂಪಲ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದಾಗ ಅನುದಾನವನ್ನು ಪಡೆದಿದ್ದರೂ ಕೂಡಾ ಸರ್ಕಾರದ ಕೆಲವು ನಿಮಯಗಳಿಂದಾಗಿ ಕಟ್ಟಡ ನಿರ್ಮಾಣ ಸಾಧ್ಯವಾಗಿರಲಿಲ್ಲ. ಇನ್ಫೋಸಿಸ್ ಕೆಲವೇ ತಿಂಗಳುಗಳಲ್ಲಿ ಎಲ್ಲಾ ನಿರೀಕ್ಷೆಗಳನ್ನು ಮೀರಿ ಹೊಸ ಕಟ್ಟಡವನ್ನು ನಿರ್ಮಿಸಿದೆ ಎಂದು ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಅನಿಲ್ ಬಗಂಬಿಲ ಅವರು ಸಂತಸ ವ್ಯಕ್ತಪಡಿಸಿದ್ದಾರೆ.