ಮಂಗಳೂರು, ಸೆ. 29 (DaijiworldNews/MB) : ಘನ ತ್ಯಾಜ್ಯಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲು ನಗರ ಪಾಲಿಕೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ ಮಂಗಳೂರು ನಗರ ಪಾಲಿಕೆಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಗರ ವ್ಯಾಪ್ತಿಯಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದನ್ನು ತಡೆಯಬೇಕಾಗಬಹುದು ಎಂದು ಮಂಗಳೂರು ನಗರ ಪಾಲಿಕೆಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಪಚ್ಚನಾಡಿ ವಿಲೇವಾರಿ ಘಟಕದಲ್ಲಿ ಘನತ್ಯಾಜ್ಯದ ಬೃಹತ್ ರಾಶಿಯ ಭೂಕುಸಿತದಿಂದಾಗಿ ಪಚ್ಚನಾಡಿ, ಕುಡುಪು ಮತ್ತು ಮಂದಾರ ಪ್ರದೇಶದಲ್ಲಿ ಉದ್ಭವಿಸಿರುವ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಎ.ಎಸ್ ಅವರನ್ನು ಒಳಗೊಂಡ ಉನ್ನತ ವಿಭಾಗದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದ ಸಂದರ್ಭ ಹೈಕೋರ್ಟ್ ಮಂಗಳೂರು ನಗರ ಪಾಲಿಕೆಗೆ ಈ ಎಚ್ಚರಿಕೆ ನೀಡಿದೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 28 ರ ಸೋಮವಾರದಂದು ನಡೆಸಿದ ನ್ಯಾಯಪೀಠ ವಾದಗಳು ಮತ್ತು ಪ್ರತಿವಾದಗಳನ್ನು ಆಲಿಸಿತು. ಬಳಿಕ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಪರಿಹರಿಸಲು ನಗರ ಪಾಲಿಕೆಯು ವಿಫಲವಾದರೆ ಅಥವಾ ಘನತ್ಯಾಜ್ಯ ನಿರ್ವಹಣಾ ನಿಯಮಗಳು - 2016 ರ ಪ್ರಕಾರವಾಗಿ ಪಾಲಿಕೆ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮಗಳನ್ನು ಜಾರಿಗೆ ತರಲು ವಿಫಲವಾದರೆ ನಗರ ವ್ಯಾಪ್ತಿಯಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದನ್ನು ತಡೆಯಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.
"ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, ಪ್ರತಿದಿನ 200 ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಹಾಗಾಗಿ 2017 ರಿಂದ ಈವರೆಗೆ ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗಿರುವ ಘನತ್ಯಾಜ್ಯದ ಪ್ರಮಾಣವನ್ನು ನಗರ ಪಾಲಿಕೆ ತಿಳಿಸಬೇಕು. ಹಾಗೆಯೇ 2017 ರಿಂದ ಈವರೆಗೆ ಎಷ್ಟು ಹೊಸ ಕಟ್ಟಡಗಳಿಗೆ ಪರವಾನಗಿಗಳನ್ನು ನೀಡಲಾಗಿದೆ ಎಂದು ಕೂಡಾ ನ್ಯಾಯಾಲಯಕ್ಕೆ ತಿಳಿಸಬೇಕು" ಎಂದು ನ್ಯಾಯಪೀಠ ಆದೇಶಿಸಿದೆ.
ಹಾಗೆಯೇ ನಗರದ ಘನತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯನ್ನು ನೇಮಿಸಲು ಪಾಲಿಕೆ ಯೋಜಿಸುತ್ತಿದೆಯೇ ಎಂಬುದನ್ನು ಕೂಡಾ ಹೈಕೋರ್ಟ್ಗೆ ತಿಳಿಸುವಂತೆ ಹೈಕೋರ್ಟ್ ಸೂಚಿಸಿದೆ. ಇನ್ನು ಈ ವಿಚಾರದಲ್ಲಿ ಅಧಿಕಾರಿಗಳ ವಿರುದ್ದ ಈವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೂಡಾ ಹೈಕೋರ್ಟ್ ಪ್ರಶ್ನಿಸಿದೆ.
ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 12 ಕ್ಕೆ ಮುಂದೂಡಿದೆ.