ಉಡುಪಿ, ಸೆ 29(DaijiworldNews/PY): ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 70ರಷ್ಟು ನೌಕರರು ಗುತ್ತಿಗೆ ಆಧಾರಿತ ಕೆಲಸ ಮಾಡುತ್ತಾರೆ. ಕರ್ನಾಟಕದಲ್ಲಿ ಸುಮಾರು 30000 ಮಂದಿ ಮತ್ತು ಉಡುಪಿ ಜಿಲ್ಲೆಯಲ್ಲಿ 512 ಗುತ್ತಿಗೆ ಆಧಾರಿತ ನರ್ಸ್ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ನಮ್ಮ ಚಳುವಳಿಗೆ ಮೂರೂ ದಿನ ಕಳೆದರು ಇದುವರೆಗೆ ಸರಕಾರ ಯಾವುದೇ ಸ್ಪಂದನೆ ವ್ಯಕ್ತ ಪಡಿಸಿಲ್ಲ. ಅಲ್ಲದೆ ಹೋರಾಟ ಮಾಡಿದವರ ಮೇಲೆ ನೋಟಿಸ್ ಜಾರಿ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಇಲಾಖೆ ಸಿಬ್ಬಂದಿಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷ ಮಂಜುನಾಥ್ ಸರ್ಕಾರವನ್ನು ಟೀಕಿಸಿದರು.


ಸೋಮವಾರ ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘ (ಬಿ.ಎಂ.ಎಸ್ ಸಂಯೋಜಿತ) ದಿಂದ ನಡೆಸಲಾಗುತ್ತಿರುವ ಅಸಹಕಾರ ಚಳುವಳಿ (ಕೆಲಸ ಸ್ಥಗಿತ ಹೋರಾಟ) ಮೂರನೇ ದಿನ ಪೂರೈಸಿದೆ ಎಂದರು.
ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಸರಕಾರದಿಂದ ಒಳ್ಳೆಯ ವೇತನ ಸೌಲಭ್ಯ ಸಿಕ್ಕಿಲ್ಲ. ನಮಗೆ ಜನರ ಚಪ್ಪಾಳೆ ಬೇಡ, ಸರಕಾರ ಸೌಲಭ್ಯ ಕೊಡಲಿ. ಕಳೆದ 15 ವರ್ಷಗಳಿಂದ ಬೇರೆ ಸರಕಾರಗಳಿಗೆ ಬೇಡಿಕೆ ಪೂರೈಸುವಂತೆ ಮನವಿ ಮಾಡಿದ್ದೇವೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ವೈದ್ಯರ ಬೇಡಿಕೆಗಳು ಗುತ್ತಿಗೆ ಆಧಾರಿತ ನೌಕರರು ಎಂದರೆ ತಾತ್ಸಾರವೇ ಸರಕಾರಕ್ಕೆ? ಎಂದು ಕೇಳಿದರು.
ಸದ್ಯ ಪ್ರತಿಭಟನೆಯಿಂದಾಗಿ ಕೊರೊನಾ ತಪಾಸಣೆ, ಕೊರೊನಾ ಕಾಲ್ ಸೆಂಟರ್ಗಳು, ಕೊರೊನಾ ವರದಿ ಸಲ್ಲಿಸುವುದು, ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ, ಅಂಧತ್ವ ಕಾರ್ಯಕ್ರಮ, ಒಳ ಮತ್ತು ಹೊರ ರೋಗಿಗಳ ತಪಾಸಣೆ, ಮಲೇರಿಯಾ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಮಾಡುವಲ್ಲಿ ನಮ್ಮ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಹೊಣೆ ದೊಡ್ಡದು ಎಂದು ತಿಳಿಸಿದರು.
ಖಾಯಂ ಸ್ಟಾಫ್ ನರ್ಸ್ಗಳಿಗೆ 38000 ಸಿಗಬೇಕು ಆದರೆ ವೇತನ ಬಿಟ್ಟು ಬೇರೆ ಯಾವುದೇ ಭತ್ಯೆ ಸಿಗುತ್ತಿಲ್ಲ. ಗುತ್ತಿಗೆದಾರರಿಗೆ ಕೇವಲ 10000 ಸಿಗುತ್ತಿದೆ. ಸರಕಾರ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಮೇಲೆ ತಾರತಮ್ಯ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ, ಗುರುರಾಜ್ ಗಂಗಾಣಿ, ಪ್ರದಾನ ಕಾರ್ಯದರ್ಶಿ, ಡಾ ರೇಷ್ಮಾ ಪೈ , ಮಹಿಳಾ ಘಟಕದ ಅಧ್ಯಕ್ಷೆ, ರೂಪಕ್ ನಾಗರಾಜ್, ಉಪಾಧ್ಯಕ್ಷರು, ಗಿರೀಶ್, ಖಜಾಂಚಿ ಉಪಸ್ಥಿತರಿದ್ದರು.