ಲೋಹಿತ್ ಕುಮಾರ್,
ಮಂಗಳೂರು, ಸೆ. 29 (DaijiworldNews/SM): ಪೆರಾರದ ಜಾತ್ರೆ ಮುಗಿಸಿ, ಪೊಳಲಿ ಜಾತ್ರೆಯ ತಯಾರಿಯಲ್ಲಿದ್ದವರ ಬಾಳಿಗೆ ಕೊರೋನಾ ಹೊಡೆತ ಬಿದ್ದಿದ್ದು, ಬದುಕಿನ ದಿಕ್ಕು ತಪ್ಪಿಸಿದೆ. ಜಾತ್ರೆಗಳಲ್ಲಿ ಮನೋರಂಜನೆ ನೀಡಿ ಹೊಟ್ಟೆ ತುಂಬಿಸುತ್ತಿದ್ದ ಕುಟುಂಬವೀಗ ತುತ್ತು ಅನ್ನಕ್ಕೂ ಪರದಾಡುತ್ತಿದೆ. ಸೊತ್ತುಗಳ ಜೊತೆಗೆ ಜೀವನಕ್ಕೂ ತುಕ್ಕು ಹಿಡಿಯುತ್ತಿದೆ. ಊರ ಉತ್ಸವದಲ್ಲಿ ರಾಟೆ, ರೈಲಿನ ಬಂಡಿ ಮೂಲಕ ಮನೋರಂಜನೆ ನೀಡುತ್ತಿದ್ದವರ ಬದುಕಿನ ಜಾತ್ರೆ ಕೊರೊನಾ ಕಾರಣದಿಂದ ಹಳಿ ತಪ್ಪಿದೆ.


ಜಾತ್ರೆಯೆಂದರೆ ಅಲ್ಲಿ ಅತ್ಯಂತ ಆಕರ್ಷಣೆಯಾಗಿರುವುದೇ ತೊಟ್ಟಿಲುಗಳು. ಅದು, ಜಾತ್ರೆಗೆ ಸೇರಿದವರಿಗೆ ಅವುಗಳು ಮನೋರಂಜನೆಯ ತೊಟ್ಟಿಲು.... ಆದರೆ, ಅವುಗಳನ್ನು ನಡೆಸುವವರ ಪಾಲಿಗೆ ಅನ್ನದ ಬಟ್ಟಲು. ಆದರೆ, ಅದೇ ಅನ್ನದ ಬಟ್ಟಲು ಮಳೆ ನೀರಿಗೆ, ಸೂರ್ಯನ ಶಾಖಕ್ಕೆ ತುಕ್ಕು ಹಿಡಿಯುತ್ತಿದ್ದರೆ, ಆ ಕುಟುಂಬದ ಗತಿಯೇನು? ಹೌದು, ಇಂತಹುದೇ ದುಸ್ಥಿತಿಗೆ ವಿಜಯಪುರದ 2 ಕುಟುಂಬಗಳು ಬಜ್ಪೆಯ ಪಡುಪೆರಾರದಲ್ಲಿ ನಿತ್ಯ ಕಣ್ಣೀರಿಡುತ್ತಿವೆ. ಕಳೆದ ಮಾರ್ಚ್ ತಿಂಗಳ ಪೆರಾರ ಜಾತ್ರೆಯ ಸಮಯ ಊರೂರಿನ ಜಾತ್ರೆಗಳಲ್ಲಿ ರಾಟೆ ತೊಟ್ಟಿಲು, ಡ್ರ್ಯಾಗನ್ ರೈಲು ಕಟ್ಟಿ ಬದುಕು ಕಟ್ಟಿಕೊಳ್ಳುವ ವಿಜಯಪುರ ಇಂಡಿ ತಾಲೂಕಿನ ಎರಡು ಕುಟುಂಬಗಳು ಸರಂಜಾಮುಗಳೊಂದಿಗೆ ಪೆರಾರಕ್ಕೆ ಆಗಮಿಸಿತ್ತು. ಜಾತ್ರೆಯಲ್ಲಿ ಒಂದು ದಿನದ ಆಟವೂ ನಡೆದಿತ್ತು. ಆದರೆ, ಅಷ್ಟರಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಾಯಿತು. ಅಂದು ಜಾರಿಗೆ ಬಂದ ಲಾಕ್ ಡೌನ್ ಈ ಮುಗ್ದ ಕುಟುಂಬಗಳ ಜೀವನವನ್ನೇ ಲಾಕಾಗಿರಿಸಿದೆ.



ಇಂಡಿ ತಾಲೂಕಿನ ಹಲ್ಲಳ್ಳಿ ಊರಿನ ಎರಡು ಕುಟುಂಬಗಳು ಪಡುಪೆರಾರದಲ್ಲಿ ಸಣ್ಣದೊಂದು ಗುಡಿಸಲು ನಿರ್ಮಿಸಿಕೊಂಡು ದಿನದೂಡುತ್ತಿದ್ದಾರೆ. ಎರಡು ಕುಟುಂಬಗಳಲ್ಲಿ ಗಂಡಸರು, ಮಹಿಳೆಯರು, ನಾಲ್ಕು ಮಕ್ಕಳು ಸಹಿತ ಒಟ್ಟು ಆರು ಮಂದಿ ಇದ್ದಾರೆ. ಊರೂರಿನ ಜಾತ್ರೆಯಲ್ಲಿ ತೊಟ್ಟಿಲು ಕಟ್ಟುವುದೇ ಇವರ ಬದುಕಿನ ಆದಾಯ. ಆದರೆ, ಲಾಕ್ ಡೌನ್ ನಿಂದಾಗಿ ಜಾತ್ರೆಗಳಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಊರಿಗೆ ಮರಳಬೇಕಾದರೆ ಒಂದು ಲಾರಿಗೆ ಮೂವತ್ತು ಸಾವಿರದಂತೆ ಮೂರು ಲಾರಿಯಲ್ಲಿ ಹೊತ್ತೊಯ್ಯುವಷ್ಟು ಸರಂಜಾಮುಗಳಿರುವುದರಿಂದ 90 ಸಾವಿರದಷ್ಟು ಹಣ ಇವರಿಗೆ ಅವಶ್ಯಕವಾಗಿದೆ. ಆದರೆ, ಆದಾಯ ಇಲ್ಲದ ಇವರಿಗೆ, ಸ್ಥಳೀಯ ಜನಪ್ರತಿನಿಧಿಗಳು, ದಾನಿಗಳು ನೀಡಿದ ಆಹಾರವೇ ಹಸಿವನ್ನು ನೀಗಿಸುತ್ತಿರುವುದು. ಒಟ್ಟಿನಲ್ಲಿ, ಜಾತ್ರೆಯಲ್ಲಿ ನಮಗೆಲ್ಲಾ ಮನೋರಂಜನೆ ನೀಡುತ್ತಿದ್ದ ಕುಟುಂಬವೊಂದು ಇಂದು ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಿಸುತ್ತಿದೆ.
ಲಾಕ್ ಡೌನ್ ನಿಂದಾಗಿ ಜಾತ್ರೆ ಉತ್ಸವಗಳಿಲ್ಲದೆ ಹೊರಾಂಗಣದಲ್ಲೇ ರಾಶಿ ಬಿದ್ದಿರುವ ಸಾಮಾಗ್ರಿಗಳಿಗೆ ತುಕ್ಕು ಹಿಡಿದಂತೆ, ಈ ಕುಟುಂಬದ ಬದುಕಿನ ಜಾತ್ರೆಯೂ ರಾಟೆ, ತೊಟ್ಟಿಲಿನಂತೆ ಸ್ಥಗಿತವಾಗಿದೆ. ಕಾಲ ಚಕ್ರ ಉರುಳುತ್ತಿದೆ, ಕೆಲವೇ ತಿಂಗಳಲ್ಲಿ ಕಾಲಚಕ್ರವು ಉರುಳಿ ಋತುಮಾನವನ್ನು ಪೂರೈಸುತ್ತದೆ. ಆ ಬಳಿಕವಾದರೂ ಈ ಕುಟುಂಬ ಮರಳಿ ತನ್ನ ಗೂಡು ಸೇರುವುದೋ ಅಥವಾ ಜಾತ್ರೆ ಉತ್ಸವಗಳಲ್ಲಿ ರೈಲು, ತೊಟ್ಟಿಲ ಮೂಲಕ ತನ್ನ ಬದುಕಿನ ಹಳಿಗೇರುವುದೋ ಎಂಬುದನ್ನು ಕಾಲವೇ ಉತ್ತರಿಸಬೇಕಾಗಿದೆ.