ಮಣಿಪಾಲ, ಸೆ 30(DaijiworldNews/PY): ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಂತಾನೋತ್ಪತ್ತಿ(ಪ್ರಜನನ) ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಆರಂಭವಾಗಲಿದೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಅನುಮೋದನೆಯಂತೆ ಈ ವಿಭಾಗ ಆರಂಭಿಸುತ್ತಿದ್ದು, ಡಾ.ಪ್ರತಾಪ್ ಕುಮಾರ್ ಅವರ ನೇತೃತ್ವದಲ್ಲಿ ಈ ವಿಭಾಗವು ವಾರದ ಕೆಲಸದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 4.00 ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ.

ಸಂತಾನೋತ್ಪತ್ತಿ ಔಷಧ (ಪ್ರಜನನ) ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ತ ಡಾ.ಪ್ರತಾಪ್ ಕುಮಾರ್ ಎನ್, ಅವರು “ಮಣಿಪಾಲ್ ಸಹಾಹಿತ ಪ್ರಜನನ ಕೇಂದ್ರವನ್ನು ಪ್ರತ್ಯೇಕ ವಿಭಾಗವಾಗಿ ಉನ್ನತೀಕರಣಿಸಿದ್ದು, ಸಂತಾನೋತ್ಪತ್ತಿ ಔಷಧ (ಪ್ರಜನನ) ಮತ್ತು ಶಸ್ತ್ರಚಿಕಿತ್ಸೆ ವಿಭಾಗವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ವಿಭಾಗವು ಈ ಕೆಳಗಿನ ಸೌಲಭ್ಯಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲಿದ್ದು, ಅಂಡೋತ್ಪತ್ತಿ ಪ್ರಚೋದನೆ, ಟ್ರಾನ್ಸ್ವಾಜಿನಲ್ ಸೋನೋಗ್ರಾಫಿಕ್ ಕಾರ್ಯವಿಧಾನಗಳು, ಗರ್ಭಾಶಯದ ಗರ್ಭಧಾರಣೆ, ಭ್ರೂಣ ವರ್ಗಾವಣೆಯೊಂದಿಗೆ ವಿಟ್ರೊ ಫಲೀಕರಣ (ಐವಿಎಫ್-ಇಟಿ), ಇಂಟ್ರಾ ಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ಐಸಿಎಸ್ಐ), ಲೇಸರ್ ಅಸಿಸ್ಟೆಡ್ ಹ್ಯಾಚಿಂಗ್, ವಾಸಲ್/ಎಪಿಡಿಡೈಮಲ್ ಮತ್ತು ಟೆಸ್ಟಿಕ್ಯುಲರ್ ವೀರ್ಯ ಹೊರತೆಗೆಯುವಿಕೆ (ಮೆಸಾ/ಟೆಸಾ), ಮೊಟ್ಟೆ/ವೀರ್ಯ ದಾನ ಕಾರ್ಯಕ್ರಮ, ಭ್ರೂಣ ಮತ್ತು ವೀರ್ಯ ಬ್ಯಾಂಕಿಂಗ್, ಕಂಪ್ಯೂಟರ್ ನೆರವಿನ ವೀರ್ಯ ಅಧ್ಯಯನ (ಸಿಎಎಸ್ಎ), ವೀರ್ಯ ಡಿಎನ್ಎ ಹಾನಿ ಮೌಲ್ಯಮಾಪನ, ವೈ ಕ್ರೋಮೋಸೋಮ್ ಮೈಕ್ರೊಡೈಲೆಶನ್ ಪತ್ತೆ, ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟರೊಸ್ಕೋಪಿಕ್ ಕಾರ್ಯವಿಧಾನಗಳು, ಸಮಗ್ರ ಪುರುಷ ಬಂಜೆತನ ಮೌಲ್ಯಮಾಪನ ಮತ್ತು ಚಿಕಿತ್ಸೆ,ಸರೊಗಸಿ’ ಮುಂತಾದ ಆಧುನಿಕ ಸೌಲಭ್ಯ ದೊರೆಯಲಿದೆ ಎಂದರು.
ಕೆಎಂಸಿಯ ಡೀನ್ ಡಾ.ಶರತ್ ಕೆ ರಾವ್ ಅವರು ಹೊಸ ವಿಭಾಗಕ್ಕೆ ಶುಭ ಕೊರುತ್ತಾ, "ವಿಭಾಗಕ್ಕೆ ಸಿಕ್ಕ ಹೊಸ ಸ್ಥಾನಮಾನದೊಂದಿಗೆ ನಾವು ಹೆಚ್ಚಿನ ಸಂಶೋಧನಾ ಚಟುವಟಿಕೆಗಳನ್ನು ಮಾಡಬಹುದು ಮತ್ತು ಇದರಿಂದ ಸಮಾಜಕ್ಕೆ ಇನ್ನಷ್ಟು ಸಹಾಯವಾಗಲಿದೆ" ಎಂದು ಹೇಳಿದರು.