ಮಂಗಳೂರು, ಸೆ. 30 (DaijiworldNews/SM): ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೊಡ್ಡ ತಲೆನೋವಾಗಿರುವ ತ್ಯಾಜ್ಯ ಸಂಗ್ರಹ ವಿಚಾರವನ್ನು ಹೈಕೋರ್ಟ್ ನೋಟೀಸ್ ಬಳಿಕ ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ತ್ಯಾಜ್ಯರಾಶಿಯಿಂದಾಗಿ ಮಂದಾರ ಪ್ರದೇಶ ನಾಶವಾಗಿದ್ದು, ಮುಂದಿನ ಅನಾಹುತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಪ್ರತ್ಯೇಕಿಸಬೇಕಿದ್ದು, ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿದೆ.

ಈ ಬಗ್ಗೆ ಪಾಲಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾಹಿತಿ ನೀಡಿದ್ದು, ನಗರದಲ್ಲಿ ದಿನನಿತ್ಯ ಹಸಿಕಸ ಸಂಗ್ರಹ ಹಾಗೂ ಶುಕ್ರವಾರದಂದು ಒಣಕಸ ಮಾತ್ರವೇ ಸಂಗ್ರಹ ನಡೆಯಲಿದೆ. ಒಣಕಸ ಹಾಗೂ ಹಸಿಕಸವಾಗಿ ಪ್ರತ್ಯೇಕಿಸಿ ತ್ಯಾಜ್ಯ ನೀಡದಿದ್ದರೆ ಅಕ್ಟೋಬರ್ 2ರಿಂದ ದಂಡ ವಿಧಿಸಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲೀಕರಣ ಬೈಲಾ 2019ರಂತೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಅದರಂತೆ ಮನೆ, ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯ ವಿಂಗಡಿಸದಿದ್ದಲ್ಲಿ 1500 ರೂಪಾಯಿಯಿಂದ 5000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಭಾರೀ ತ್ಯಾಜ್ಯ ಉತ್ಪಾದಕರಿಗೆ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಲಾಗಿತ್ತು. ಈ ನಡುವೆ ಕೋವಿಡ್ ಕಾರಣದಿಂದಾಗಿ ಆದೇಶವನ್ನು ಅನುಷ್ಠಾನಗೊಳಿಸಲು ವಿಳಂಬವಾಗಿದೆ. ಆದರೆ ಅಕ್ಟೋಬರ್ 2ರಿಂದ ಎಲ್ಲಾ ವಾರ್ಡ್ಗಳಲ್ಲಿಯೂ ಕಟ್ಟುನಿಟ್ಟಾಗಿ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡವನ್ನು ವಿಧಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಇನ್ನು ಈ ಹಿಂದೆಯೇ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮಾರಾಟ ಅಥವಾ ಉಪಯೋಗವನ್ನು ನಿಷೇಧಿಸಲಾಗಿದ್ದು, ಈ ನಿಯಮ ಕೂಡ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಉದ್ದಿಮೆದಾರರು, ನಾಗರಿಕರು ಮಾರಾಟ ಅಥವಾ ಉಪಯೋಗಿಸುವುದು ಕಂಡು ಬಂದಲ್ಲಿ ಅವರಿಗೂ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಹಸಿ ಕಸ-ಒಣಕಸ ವಿಂಗಡಿಸದಿದ್ದಲ್ಲಿ ದಂಡ
---------------
ಮನೆ, ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯ ವಿಂಗಡಿಸದಿದ್ದಲ್ಲಿ 1500-5000 ರೂ. ದಂಡ
ಭಾರಿ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ವಿಂಗಡಣೆ ಮಾಡದಿದ್ದಲ್ಲಿ 15000-25 ಸಾವಿರ ರೂ. ದಂಡ
ತೆರೆದ ಪ್ರದೇಶಗಳಲ್ಲಿ ತ್ಯಾಜ್ಯ ಬಿಸಾಡಿದರೆ 1500ರಿಂದ 25 ಸಾವಿರ ರೂ. ದಂಡ
ಬಯೋಮೆಡಿಕಲ್ ತ್ಯಾಜ್ಯ ಘನತ್ಯಾಜ್ಯದೊಂದಿಗೆ ಮಿಶ್ರಣಗೊಂಡಲ್ಲಿ 10000-25 ಸಾವಿರ ರೂ. ದಂಡ
ಕಟ್ಟಡ ಭಗ್ನವಶೇಷವನ್ನು ತೆರೆದ ಪ್ರದೇಶದಲ್ಲಿ ಬಿಸಾಡಿದರೆ 25 ಸಾವಿರ ರೂ. ದಂಡ
ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಿದ್ದಲ್ಲಿ 1500ರೂ.ನಿಂದ 25,000ರೂ.ವರೆಗೆ ದಂಡ