ಮುಡಿಪು, ಸೆ. 30 (DaijiworldNews/SM): ಮುಡಿಪು ಸಮೀಪದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಣ್ಣಿನ ಗಣಿಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿರುವ ಸಹಾಯಕ ಆಯುಕ್ತರ ನೇತೃತ್ವದ ತಂಡ 28 ಲಾರಿಗಳು, ಐದು ಜೆಸಿಬಿ, ಮೂರು ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡು, ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಇಬ್ಬರ ಮೇಲೆ ಪ್ರಕರಣ ದಾಖಲಿಸಲು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ಸಹಾಯಕ ಆಯುಕ್ತ ಮದನ್ ಮೋಹನ್ ಸಿ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಮುಡಿಪು ಸಮೀಪದ ಪಜೀರು ಗ್ರಾ.ಪಂಚಾಯತ್ ಗೆ ಒಳಪಟ್ಟ ಜಾಗ ಹಾಗೂ ಬಾಳೆಪುಣಿ ಗ್ರಾ.ಪಂಚಾಯತ್ ಗೆ ಒಳಪಟ್ಟಿರುವ ಜಾಗಕ್ಕೆ ದಾಳಿ ನಡೆದಿದೆ. ಇಲ್ಲಿ ಹೊರರಾಜ್ಯಗಳಿಗೆ ಮಣ್ಣು ಸಾಗಾಟಕ್ಕೆ ಯತ್ನಿಸುತ್ತಿದ್ದ 28 ಲಾರಿಗಳು ಹಾಗೂ ಮಣ್ಣು ಅಗೆಯುತ್ತಿದ್ದ ಮೂರು ಹಿಟಾಚಿ ಹಾಗೂ ಐದು ಜೆಸಿಬಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಡಿಪು ಆಸುಪಾಸಿನಲ್ಲಿ ವ್ಯಾಪಕವಾಗಿ ಮಣ್ಣಿನ ಗಣಿಗಾರಿಕೆ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲೂ ಗಣಿಗಾರಿಕೆ ನಿರಂತರವಾಗಿ ನಡೆಯುತಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಕೃಷಿ ಭೂಮಿ ನಾಶ, ಹಾನಿ, ಮಾಲಿನ್ಯದ ಕುರಿತು ವರದಿ ಪ್ರಕಟವಾಗಿದ್ದರೂ, ಬಂಟ್ವಾಳ ತಹಶೀಲ್ದಾರ್ ಆಗಲಿ ಅಲ್ಲಿನ ಕಂದಾಯ ಇಲಾಖೆಯಾಗಲಿ ಯಾವುದೇ ಕ್ರಮಕೈಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ವ್ಯಾಪಕವಾಗಿ ಗಣಿಗಾರಿಕೆ ಮುಂದುವರಿದಿತ್ತು. ಕಾನೂನು ಪ್ರಕಾರ ಅನುಮತಿ ಪಡೆದೇ ಗಣಿಗಾರಿಕೆ ನಡೆಸುತ್ತಿದ್ದೇವೆ ಅನ್ನುವ ಕಾರಣವನ್ನು ಮುಂದಿಟ್ಟುಕೊಂಡು ಮುಡಿಪು ಪ್ರದೇಶವನ್ನು ಅಕ್ಷರಶ: ಬಳ್ಳಾರಿಯಂಥೆ ಮಾರ್ಪಾಡು ಮಾಡಿದ್ದರು.
ಅನುಮತಿ ನೀಡಿರುವ ಸರ್ವೇ ನಂಬರ್ ಬದಲಿಸಿ ಇನ್ನೊಂದು ಜಾಗದಲ್ಲಿ ಗಣಿಗಾರಿಕೆ ಹಾಗೂ ಸರಕಾರ ನೀಡಿರುವ ಲೀಸ್ ಕ್ಯಾನ್ಸಲ್ ಆಗಿದ್ದರೂ ಮತ್ತೆ ಅದೇ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಜಾಗಕ್ಕೆ ಸೇರಿದ ಇಬ್ಬರ ವಿರುದ್ಧ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಸಹಾಯಕ ಆಯುಕ್ತ ಮದನ್ ಮೋಹನ್ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಅಕ್ರಮ ಮಣ್ಣು ಗಣಿಗಾರಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್ ಗಳು ಹರಿದಾಡಿದ್ದವು. ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ಅಭಿಯಾನ ಆರಂಭವಾಗಿತ್ತು. ಅಲ್ಲದೆ ಬಾಳೆಪುಣಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಜಾಗ ಸಮತಟ್ಟುಗೊಳಿಸುವ ಪ್ರಕ್ರಿಯೆಗೆ ಟೆಂಡರ್ ಕರೆದಿರುವುದೇ ಕಾನೂನು ಬಾಹಿರ. ಭೂಮಾಫಿಯಾಗೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಮಣಿದಿರುವ ಕುರಿತು ಪೋಸ್ಟ್ ಗಳನ್ನು ಹಾಕಲಾಗಿತ್ತು. ನಿರಂತರ ಪೋಸ್ಟ್ ಗಳ ಬಳಿಕ ಇದೀಗ ದಾಳಿ ನಡೆದಿದೆ.