ಕಾಸರಗೋಡು, ಸೆ. 30 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿಯಂತ್ರಣಗಳನ್ನು ಬಿಗಿಗೊಳಿಸಲು ಕಾಸರಗೋಡು ಜಿಲ್ಲಾಡಳಿತ ತೀರ್ಮಾನಿಸಿದೆ. ಅದರಂತೆ ಮುಂದಿನ ಆದೇಶದ ತನಕ ವಿವಾಹ ಸಮಾರಂಭಗಳಿಗೆ ಒಟ್ಟು 50 ಮಂದಿಗೆ ಮಾತ್ರವೇ ಭಾಗವಹಿಸಲು ಅವಕಾಶ ಇರಲಿದೆ.

ಇನ್ನುಳಿದಂತೆ ಇತರ ಕಾರ್ಯಕ್ರಮಗಳಿಗೆ ಕೇವಲ ೨೦ ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಮರಣ ನಂತರದ ಕಾರ್ಯಕ್ರಮಗಳಿಗೂ 20 ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ವ್ಯಾಪಾರ ಮಳಿಗೆಗಳಲ್ಲಿ ಮಾಲಕರು, ನೌಕರರು ಮಾಸ್ಕ್ ಹಾಗೂ ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು. ಆದೇಶ ಉಲ್ಲಂಘಿಸಿದ್ದಲ್ಲಿ ಏಳು ದಿನ ಮಳಿಗೆ ಮುಚ್ಚಿಸಲಾಗುವುದು. ವ್ಯಾಪಾರ ಮಳಿಗೆಗಳು ಕೋವಿಡ್ ಮಾನದಂಡ ಪಾಲಿಸಬೇಕು. ಈ ಬಗ್ಗೆ ನಿಗಾ ವಹಿಸಲು ಪೊಲೀಸರು ಹಾಗೂ ವಿಶೇಷ ತಂಡವನ್ನು ನೇಮಿಸಲಾಗಿದೆ. ಉಲ್ಲಂಘನೆ ಕಂಡುಬಂದಲ್ಲಿ ಒಂದು ವಾರಗಳ ಕಾಲ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಇನ್ನು ಕ್ರೀಡೆಗಳಿಗೆ ಅನುಮತಿ ಇದ್ದು, ಆಟಗಾರರು, ಪ್ರೇಕ್ಷಕರು ಸೇರಿದಂತೆ ಒಟ್ಟು 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ಮಾನದಂಡ ಪಾಲಿಸಿದರೆ ಮಾತ್ರ ಅನುಮತಿ ಲಭಿಸಲಿದೆ.
ಇನ್ನು ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆ, ಅಗ್ನಿಶಾಮಕ ದಳ, ಅಬಕಾರಿ, ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಕೆ ಎಸ್ ಆರ್ ಟಿ ಸಿ ಯ ಬಸ್ ಆನ್ ಡಿಮಾಂಡ್ ಯೋಜನೆಗೆ ಎಲ್ಲಾ ಪ್ರಯಾಣಿಕರು ಸಹಕರಿಸಬೇಕು. ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಬುಧವಾರ ನಡೆದ ಜಿಲ್ಲಾ ಕೊರೋನಾ ಸಲಹಾ ಸಮಿತಿ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.