ಉಡುಪಿ, ಅ. 01 (DaijiworldNews/MB) : ಉಡುಪಿ ನಗರದಲ್ಲಿ ಸೆಪ್ಟೆಂಬರ್ 30 ರಂದು ಜಿಲ್ಲಾಧಿಕಾರಿ ಜಿ ಜಗದೀಶ್ ನೇತೃತ್ವದಲ್ಲಿ, ನಗರಸಭೆ ಕಮಿಷನರ್ ಆನಂದ್ ಕಲ್ಲೋಲಿಕರ್ ಉಪಸ್ಥಿತಿಯಲ್ಲಿ ಸರ್ಕಾರದ ಆದೇಶದಂತೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದವರ ಮೇಲೆ ಕಾರ್ಯಚರಣೆ ನಡೆಸಿ ದಂಡ ವಿಧಿಸಲಾಯಿತು.



ಕೋವಿಡ್ -19 (ಕೊರೊನಾ ವೈರಾಣು ಕಾಯಿಲೆಯ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಉಲ್ಲೇಖ(4)ರ ಅಧಿಸೂಚನೆಯಂತೆ ಅಂತವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಉಲ್ಲೇಖ (5) ರಂತೆ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪೌರಾಯುಕ್ತರು ನಗರಸಭೆ, ನಗರಸಭೆ ಆರೋಗ್ಯ ನಿರೀಕ್ಷಕರು, ಉಪವಿಭಾಗಾಧಿಕಾರಿ ಕುಂದಾಪುರ, ಎಲ್ಲಾ ತಾಲೂಕು ತಹಶೀಲ್ದಾರ್, ಮುಖ್ಯಾಧಿಕಾರಿಗಳು ಪುರಸಭೆ ಮತ್ತು ಪಟ್ಟಣ ಪಂಚಾಯತ್ ಹಾಗೂ ಅವರ ಅರೋಗ್ಯ ನಿರೀಕ್ಷಕರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಇವರೊಂದಿಗೆ ಹೆಚ್ಚುವರಿಯಾಗಿ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರು ಹಾಗೂ ಮೇಲ್ಪಟ್ಟ ಅಬಕಾರಿ ಅಧಿಕಾರಿಗಳಿಗೆ ಸಹ ಮೇಲ್ಕಂಡ ಅಧಿಕಾರವನ್ನು ಪ್ರತ್ಯಜಿಸಿ ಉಲ್ಲೇಖ (3)ರ ಆದೇಶವನ್ನು ಪರಿಷ್ಕರಿಸಿ ಆದೇಶಿಸಲಾಗಿದೆ.
ಈ ನಿಟ್ಟಿನಲ್ಲಿ ನಗರದ ಕೋರ್ಟ್ ರೋಡ್ ಬಳಿ, ವ್ಯಾಪಾರ ಮಳಿಗೆಗಳಲ್ಲಿ ಕಾರ್ಯಚರಣೆ ನಡೆಸಿದ ಜಿಲ್ಲಾಧಿಕಾರಿ, ನಗರಸಭೆ ಕಮಿಷನರ್, ಸಂಚಾರಿ ಪೋಲಿಸ್, ಹೀಗೆ ಬೇರೆಬೇರೆ ಇಲಾಖೆಯಿಂದ ಮಾಸ್ಕ್ ಧರಿಸದೆ ಇರುವವರ ವಿರುದ್ಧ ದಂಡ ವಸೂಲಿ ಮಾಡಲಾಯಿತು. ಒಟ್ಟಾರೆಯಾಗಿ (ಸೆ. 29) ಜಿಲ್ಲೆಯೆಲ್ಲೆಡೆ ರೂ. 7,55,650 ದಂಡ ವಿಧಿಸಲಾಯಿತು.
ಮುಂದಿನ ದಿನಗಳಲ್ಲಿ ಈ ಕಾರ್ಯಚರಣೆ ಇನ್ನಷ್ಟು ತೀವ್ರ ಗೊಳ್ಳಲಿದೆ. ಅಲ್ಲದೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಜನರು ತಮ್ಮ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು ಎಂದು ಜಗದೀಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಆರ್ಥಿಕ ಸಂಕಷ್ಟದ ನಡುವೆ ಜಿಲ್ಲಾಡಳಿತ ಜನರಿಂದ ದಂಡ ವಿಧಿಸಿ ಹಣ ಲೂಟಿ ಮಾಡುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ದಂಡ ವಿಧಿಸಿದ ವಿವರ ಹೀಗಿದೆ (ಸೆ. 29) :
ನಗರಸಭೆ/ಪುರಸಭೆ/ಪಟ್ಟಣ/ ಪಂಚಾಯತ್ ವ್ಯಾಪ್ತಿಯಲ್ಲಿ ಇದುವರೆಗೆ ರೂ. 1,35,100 ದಂಡ ವಸೂಲಿ ಮಾಡಲಾಗಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ (ಸೆ. 29) ರೂ. 1,62,300, ಪೋಲಿಸ್ ಇಲಾಖೆಯಿಂದ ಒಟ್ಟು ರೂ. 4,49,100, ಅಬಕಾರಿ ಇಲಾಖೆ ನಡೆಸಿದ ಕಾರ್ಯಚರಣೆ ಯಲ್ಲಿ ಒಟ್ಟು ರೂ. 2,200 ಮತ್ತು ಕಂದಾಯ ಇಲಾಖೆಯು ಒಟ್ಟು ರೂ. 6,950 ದಂಡ ವಸೂಲಿ ಮಾಡಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ರೂ. 7,55,650 ದಂಡ ವಸೂಲಾತಿಯಾಗಿದೆ. ಸೆಪ್ಟೆಂಬರ್ 30 ರ ವಿವರ ಇನ್ನಷ್ಟೇ ಬರಬೇಕಿದೆ.