ಮಂಗಳೂರು, ಅ 01(DaijiworldNews/PY): ಡ್ರಗ್ಸ್ ದಂಧೆಯನ್ನು ಬೇಧಿಸುವ ಸಲುವಾಗಿ ನಗರದ ಸಿಸಿಬಿ ಪೊಲೀಸರು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಬಂಧಿತನಾಗಿರುವ ನೈಜೀರಿಯಾದ ಪ್ರಜೆ ಫ್ರಾಂಕ್ ಎಂಬಾತನ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಈ ಹಿಂದೆ ಫ್ರಾಂಕ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸ್ಥಳಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದು, ಆತನೊಂದಿಗೆ ಸಂಪರ್ಕದಲ್ಲಿದ ಇತರರ ಬಗ್ಗೆಯೂ ಕೂಡಾ ತನಿಖೆ ನಡೆಸುತ್ತಿದ್ದಾರೆ. ಆತ ಬೇರೆ ಕಡೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿರಬಹುದಾದ ಮಾದಕ ವಸ್ತುಗಳನ್ನು ಪತ್ತೆಹಚ್ಚುವ ಕಾರ್ಯಕ್ಕೂ ಪೊಲೀಸರು ಮುಂದಾಗಿದ್ದಾರೆ. ಫ್ರಾಂಕ್ ಮಾದಕ ವಸ್ತುಗಳನ್ನು ಮೂಲತಃ ತೊಕ್ಕೊಟ್ಟು ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ ಶಾನ್ ಎಂಬ ವ್ಯಕ್ತಿಗೆ ನೀಡುತ್ತಿದ್ದ ಎಂದು ಹೇಳಲಾಗುತ್ತದೆ. ಶ್ಯಾನ್ನ ಕೈಯಿಂದ ಕಿಶೋರ್ ಅಮನ್ ಶೆಟ್ಟಿ, ನೌಶಿಲ್ ಹಾಗೂ ಇತರರು ಖರೀದಿಸಿ ಬೆಂಗಳೂರಿಗೆ ತರುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದಿಗ ಶ್ಯಾನ್ ಹಾಗೂ ಫ್ರಾಂಕ್ ಇಬ್ಬರೂ ಕೂಡಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಡ್ರಗ್ ಪೆಡ್ಲರ್ಗಳಿಗೆ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳು ಹಾಗೂ ಸಿನೆಮಾ ರಂಗದ ಕೆಲವು ವ್ಯಕ್ತಿಗಳೊಂದಿಗೆ ನಂಟಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಂಧಿಸಲ್ಪಟ್ಟಿರುವವರು ಪಾರ್ಟಿಗಳನ್ನು ನಡೆಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಬುಕ್ಕಿಗಳು, ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ವ್ಯಕ್ತಿಗಳು ಭಾಗವಹಿಸಿದ್ದರು.
ಸಿಸಿಬಿ ಹಾಗೂ ಎಕನಾಮಿಕ್ ಆಂಡ್ ನಾರ್ಕೊಟಿಕ್ ಪೊಲೀಸರು ಸಿಂಥೆಟಿಕ್ ಡ್ರಗ್ಗಳ ಪೂರೈಕೆ ಜಾಲದ ಹಿಂದೆ ಬೆನ್ನು ಬಿದ್ದಿದ್ದರೆ, ಇನ್ನೊಂದ ಕಡೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ಗಾಂಜಾ, ಚರಸ್ ಹಾಗೂ ಇತರ ಮಾದಕ ವಸ್ತುಗಳ ಜಾಲದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಶಿವಮೊಗ್ಗ ಹಾಗೂ ಇತರ ಕಡೆಗಳಿಂದ ಭಾರಿ ಪ್ರಮಾಣದಲ್ಲಿ ನಗರಕ್ಕೆ ಗಾಂಜಾ ಸಾಗಾಟವಾಗುತ್ತಿದೆ ಎನ್ನಲಾಗುತ್ತಿದೆ.
ಈ ನಡುವೆ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ರಾಜೇಂದ್ರ ನಾಯಕ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಯಿಸಲಾಗಿದ್ದು, ಶಿವಪ್ರಕಾಶ್ ಅವರ ಸ್ಥಾನಕ್ಕೆ ಕಾಪು ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ನಿಯೋಜನೆ ಮಾಡಲಾಗಿದೆ.