ಬ್ರಹ್ಮಾವರ, ಅ 01(DaijiworldNews/PY): 7ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಹಳೆಯ ಮನೆಯ ಕೊಠಡಿಯಲ್ಲಿದ್ದ ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ ಅದೇ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಿಯಾರ ಗ್ರಾಮದ ಕಾಜ್ರಳ್ಳಿ ಜನತಾ ಕಾಲೊನಿಯಲ್ಲಿ ಸೆ.30ರ ಬುಧವಾರದಂದು ನಡೆದಿದೆ.

ಕಾಜ್ರಳ್ಳಿ ಜನತಾ ಕಾಲೊನಿ ನಿವಾಸಿಗಳಾದ ಕವಿತಾ (29) ಹಾಗೂ ಉಮೇಶ ಅವರ ಪುತ್ರ 7 ನೇ ತರಗತಿ ವಿದ್ಯಾರ್ಥಿ ತನುಷ್(12) ಎಂದು ಮೃತ ಬಾಲಕ.
ತನುಷ್ ಕಲಿಯುವಿಕೆಯಲ್ಲಿ ಹಿಂದಿದ್ದು, ಪೋಷಕರು ಹೇಳಿದ ಮಾತನ್ನು ಕೇಳದೇ ಹಠಮಾರಿತನದಿಂದ ವರ್ತಿಸುತ್ತಿದ್ದ ಎನ್ನಲಾಗಿದೆ.
ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಕವಿತಾ ಅವರು ಎಂದಿನಂತೆ ತಮ್ಮ ಕೆಲಸಕ್ಕೆ ಹೊರಟಿದ್ದರು. ಆನ್ಲೈನ್ ಕ್ಲಾಸ್ಗೆ ಹಾಜರಾಗಬೇಕಿದ್ದರಿಂದ ಮಗನನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಹೊರಡುವ ಮುನ್ನ ಒಳ್ಳೆಯ ರೀತಿಯಲ್ಲಿ ಓದು ಎಂದು ಬುದ್ದಿ ಮಾತನ್ನು ಹೇಳಿದ್ದರು. ತನುಷ್ ಹಠಮಾರಿತನದಿಂದ ಹಾಗೂ ವಿದ್ಯೆ ಸರಿಯಾಗಿ ತಲೆಗೆ ಹೋಗದ ಕಾರಣ ಬೇಸರಗೊಂಡು ಹಳೆಯ ಮನೆಯ ಕೊಠಡಿಯಲ್ಲಿದ್ದ ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿದ್ದು, ಅದೇ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಸುಮಾರು 10 ಗಂಟೆಯಿಂದ 1 ಗಂಟೆಯ ನಡುವೆ ತನುಷ್ ಮೃತಪಟ್ಟಿರುವುದಾಗಿ ಆತನ ತಾಯಿ ಭಾವಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾ ಸಿಬ್ಬಂದಿಗಳು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.