ಉಡುಪಿ, ಅ. 01 (DaijiworldNews/SM): ಉತ್ತರ ಪ್ರದೇಶದ ಹತ್ರಾಸ್ ಸಂಸ್ಥೆಯ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಗಲ್ಲಿಗೇರಿಸುವಂತೆ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಅಜ್ಜರಕಾಡಿನ ಹುತಾತ್ಮರ ಸ್ಮಾರಕ ಎದುರು ಗುರುವಾರ ಅಕ್ಟೋಬರ್ 1ರಂದು ಪ್ರತಿಭಟನೆ ನಡೆಸಿತು.



ಈ ವೇಳೆ ಯೋಗಿ ಆದಿತ್ಯನಾಥ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಹೆಣದಂತೆ ಹೊತ್ತು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲಾದ ಅತ್ಯಾಚಾರ ವನ್ನು ಖಂಡಿಸಿದರು.
ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ಸಾಕಷ್ಟು ದೌರ್ಜನ್ಯ ನಡೆಯುತ್ತಿವೆ. ಆದರೂ ಮೋದಿ ಸರಕಾರ ಮೌನ ವಹಿಸಿದೆ. ಈಗಿನ ಪ್ರಧಾನಮಂತ್ರಿಯವರು ಬಿಜೆಪಿಯ ಅಜೆಂಡಾವನ್ನು ಕಾರ್ಯಗತ ಮಾಡ್ತ ಇದ್ದಾರೆ. ಬಿಜೆಪಿಯಲ್ಲಿ ಇಂತಹ ನರಹಂತಕರು ತುಂಬಾ ಮಂದಿ ಇದ್ದಾರೆ. ಅವರನ್ನು ಬುಡಸಮೇತ ಮಟ್ಟ ಹಾಕಬೇಕು. ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಮುಂದೆ ಕಷ್ಟದ ದಿನಗಳು ಬರಲಿವೆ. ಈಗ ಬಿಜೆಪಿಯ ಹಿಂದು ಸಂಘಟನೆಯ ನಾಯಕರು ಎಲ್ಲಿ ಅವಿತು ಕೊಡಿದ್ದಾರೆ? ದಲಿತ ನಾಯಕರು ಬಿಜೆಪಿ ಪಕ್ಷದಲ್ಲಿ ಚೇಲಗಳಾಗಿದ್ದಾರೆ. ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ನಿರ್ನಾಮ ಮಾಡುವ ಕೆಲಸ ಆಗಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಿತ್ಯನಾಥ್ ಕೂಡಲೇ ರಾಜಿನಾಮೆ ಕೊಡಬೇಕು. ಅಲ್ಲದೆ ಅತ್ಯಾಚಾರಗೈದ ಆರೋಪಿಗಳನ್ನು ಕೂಡಲೇ ಬಂದಿಸಬೇಕು ಎಂದು ಅವರು ಒತ್ತಾಯಿಸಿದರು. ಬರ್ಬರವಾಗಿ ಅತ್ಯಾಚಾರ ನಡೆದಿರುವುದಕ್ಕೆ ಸೂಕ್ತ ಸಾಕ್ಷಿಯಾಗಿದ್ದರು ಪೊಲೀಸರು ಜಾತಿ ಆಧಾರದಲ್ಲಿ ಎಫ್.ಐ.ಆರ್. ದಾಖಲಿಸದೆ ಇರುವುದು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರೀತಿ ರಕ್ಷಣೆ ಕೊಡಬಹುದು ಎಂಬುದು ಸ್ಪಷ್ಟವಾಗಿದೆ.
ಮುಖ್ಯಮಂತ್ರಿ ಸೂಚನೆಯಂತೆ ರಾತ್ರಿ 2.30ಕ್ಕೆ ಪೊಲೀಸರು ಅಜ್ಞಾತ ಸ್ಥಳದಲ್ಲಿ ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿರುವುದು ಖಂಡನೀಯವಾಗಿದೆ. ಯುವತಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗಬೇಕು. ಈ ಪ್ರಕರಣವನ್ನು ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.