ಕಾಸರಗೋಡು, ಅ. 02 (DaijiworldNews/MB) : ಕಳೆದ ಒಂದು ವಾರದಿಂದ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ನಾಳೆ ( ಅ.3) ಯಿಂದ ಅಕ್ಟೋಬರ್ 31 ರ ತನಕ ಕೋವಿಡ್ ನಿಯಂತ್ರಣ ಹಿನ್ನಲೆಯಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ನೀಡಲಾಗಿದೆ. ಇದರಂತೆ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸಾಂದರ್ಭಿಕ ಚಿತ್ರ
ಅಕ್ಟೋಬರ್ 3 ರ ಬೆಳಿಗ್ಗೆ 9 ರಿಂದ 31 ರ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಆಯಾ ಜಿಲ್ಲೆಗಳ ಸ್ಥಿತಿ ಗತಿ ಮನಗಂಡು ನಿಯಂತ್ರಣಗಳಲ್ಲಿ ಸಡಿಲಿಕೆ ಬೇಕೆ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ.
ವಿವಾಹ, ಮರಣ ನಂತರದ ಕಾರ್ಯಕ್ರಮ ಮೊದಲಾದವುಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಕೋವಿಡ್ ಮಾನದಂಡದಂತೆ ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ.ಜನರು ಸೇರುವ ಎಲ್ಲಾ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ.
ಎರಡು ದಿನಗಳ ಹಿಂದೆ ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರತಿಭಟನೆ ಸೇರಿದಂತೆ ಜನರು ಗುಂಪುಗೂಡುವ ಎಲ್ಲಾ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಲು ತೀರ್ಮಾನಿಸಲಾಗಿತ್ತು. ಇದರಂತೆ ಸರಕಾರ ಆದೇಶ ಹೊರಡಿಸಿದೆ.
ಕೇರಳದಲ್ಲಿ ಸೋಂಕಿತರ ಸಂಖ್ಯೆ ದಿನಂಪ್ರತಿ ಎಂಟು ಸಾವಿರವನ್ನು ದಾಟಿದ್ದು, ಕಾಸರಗೋಡು ಜಿಲ್ಲೆಯಲ್ಲೂ 500 ರ ಗಡಿಗೆ ತಲಪಿದೆ. ಕಳೆದ 20 ದಿನಗಳಿಂದ ಅನಿಯಂತ್ರಿತವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಲಾಕ್ ಡೌನ್ ಸಡಿಲಿಕೆಯನ್ನು ಮತ್ತೆ ಬಿಗಿಗೊಳಿಸಲು ಕೇರಳ ಸರಕಾರ ಈಗಾಗಲೇ ತೀರ್ಮಾನಿಸಲಾಗಿದೆ.