ಬಂಟ್ವಾಳ, ಅ.02 (DaijiworldNews/HR) : ಕಂದಾಯ ಇಲಾಖೆ ಬಂಟ್ವಾಳ , ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ , ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಇದರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಕಂದಾಯ ಇಲಾಖಾ ಸಿಬ್ಬಂದಿ ಗಳಿಂದ ರಕ್ತದಾನ ಶಿಬಿರ ಮಿನಿವಿಧಾನ ಸೌಧದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ನೆರವೇರಿಸಿ ಬಳಿಕ ಮಾತನಾಡಿದ ಅವರು, ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿ ಆ ಮೂಲಕ ಸಮಾಜದ ಹಿತಕಾಯುವ ಕೆಲಸವನ್ನು ಬಂಟ್ವಾಳ ತಹಶೀಲ್ಸಾರ್ ರಶ್ಮಿ ನೇತ್ರತ್ವದಲ್ಲಿ ಕಂದಾಯ ಇಲಾಖೆ ಮಾಡಿದೆ , ಇದೊಂದು ಅಭಿನಂದನೀಯ ಕಾರ್ಯಕ್ರಮ. ಸರಕಾರಿ ಕೆಲಸದ ಜೊತೆಯಲ್ಲಿ ಸಾಮಾಜದ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಈ ಕಾರ್ಯಕ್ರಮ ಶ್ಲಾಘನೀಯ. ಕೋವಿಡ್ ಜೊತೆಗೆ ಕೆಲವೊಂದು ಘಟನೆಗಳು ನಡೆದರೂ ಎದೆಗುಂದದೆ ಇಂತಹ ಉತ್ತಮ ಕಾರ್ಯಕ್ರಮ ಗಳನ್ನು ನಡೆಸಿರುವುದು ಖುಷಿ ತಂದಿದೆ ಎಂದರು.
ಇನ್ನು ಕಾರ್ಯಕ್ರಮದ ಸಂಯೋಜಕಿ ತಾಲೂಕು ತಹಶೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ , ಕಂದಾಯ ಇಲಾಖೆಯ ಪ್ರತಿಯೊಬ್ಬ ರ ಸಹಕಾರದಿಂದ ಕಾರ್ಯಕ್ರಮ ಗಳನ್ನು ಆಯೋಜಿಸಲು ಸಾಧ್ಯವಾಗಿದೆ , ಮುಂದೆಯೂ ಎಲ್ಲರ ಸಹಕಾರ ಅಗತ್ಯ ಎಂದರು.
ಬಂಟ್ವಾಳ ಬೂಡಾ ಆಧ್ಯಕ್ಷ ದೇವದಾಸ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜಾ , ತಾಲೂಕು ವೈದ್ಯಾಧಿಕಾರಿ ದೀಪಪ್ರಭು, ದೇರಳಕಟ್ಟೆಯ ಡಾ.ಶ್ರೀಲಕ್ಷ್ಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತಹಶೀಲ್ದಾರ್ ರಶ್ಮಿ ಅವರ ವಿಶೇಷ ಮುತುವರ್ಜಿಯಿಂದ ಕಳೆದ ವರ್ಷ ಗಾಂಧಿ ಜಯಂತಿಯ ಅಂಗವಾಗಿ ಮಿನಿವಿಧಾನ ಸೌಧದವನ್ನು ಸಂಪೂರ್ಣವಾಗಿ ಶುಚಿ ಮಾಡುವ ಮೂಲಕ ಇತರ ಇಲಾಖೆಗಳಿಗೆ ಮಾದರಿಯಾಗಿದ್ದರು.ಈ ಬಾರಿ ಎರಡನೇ ವರ್ಷದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಗೆ ಕಾರಣವಾಗಿದೆ.
ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ರವಿಶಂಕರ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಕಚೇರಿ ಸಿಬ್ಬಂದಿಗಳು ಹಾಗೂ ಗ್ರಾಮ ಸಹಾಯಕರು, ಗ್ರಾಮಕರಣೀಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.