ಕುಂದಾಪುರ, ಅ. 02(DaijiworldNews/PY): ಅತ್ಯಾಚಾರ ಹಾಗೂ ಹತ್ಯೆಗೀಡಾದ ದಲಿತ ಬಾಲಕಿಯರ ಪೋಷಕರಿಗೆ ಸಾಂತ್ವನ ಹೇಳಲು ಹೊರಟಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದೌರ್ಜನ್ಯ ತೀವ್ರ ಖಂಡನೀಯ ಮತ್ತು ಈ ಕೃತ್ಯದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ನೇರ ಕೈವಾಡ ಇದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ, ಹತ್ಯೆ ಓರ್ವ ಹೆಣ್ಣು ಮಗಳ ಮೇಲೆ ಎಸಗಲಾದ ಅಮಾನವೀಯ ಕ್ರೌರ್ಯ ಅಷ್ಟೇ ಅಲ್ಲ ಇದು ಮನುಕುಲಕ್ಕಾದ ಅಪಮಾನ. ಮೃತ ದೇಹವನ್ನು ಅವರ ಕುಟುಂಬಕ್ಕೆ ನೀಡದೆ ಸುಟ್ಟು ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮೃತ ದಲಿತ ಯುವತಿಯ ಕುಟುಂಬವನ್ನು ಗೃಹ ಬಂಧನದಲ್ಲಿರಿಸಿದ ಸರಕಾರದ ಕ್ರಮ ನಾಚಿಕೆಗೇಡಿನ ಸಂಗತಿ ಮತ್ತು ಸರ್ಕಾರದ ನಿಜ ಬಣ್ಣ ಬಯಲಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ತೆಗೆದುಕೊಂಡ ಈ ಕ್ರಮ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.
ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪ್ರಾಧಾನ ಕಾರ್ಯದರ್ಶಿಯವರು ಅತ್ಯಾಚಾರದಲ್ಲಿ ಸಾವನ್ನಪ್ಪಿದ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಲು ಹೊರಟವರನ್ನು ತಡೆದು ಹಲ್ಲೆ ನಡೆಸಿ ವಾಪಸ್ ದೆಹಲಿಗೆ ಕಳುಹಿಸಿದ್ದಾರೆ. ಹೀಗಾದರೆ ಉತ್ತರ ಪ್ರದೇಶದಲ್ಲಿ ಜನ ಸಾಮಾನ್ಯರ, ರೈತರ ಹಾಗೂ ಕಾರ್ಮಿಕರ ಪರಿಸ್ಥಿತಿ ಹೇಗಿರಬಹುದು ಮತ್ತು ಅವರರಿಗೆ ರಕ್ಷಣೆ ನೀಡುವರು ಯಾರು? ಎಂದು ಪ್ರಶ್ನಿಸಿರುವ ಅವರು ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಿ ತಕ್ಷಣ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.