ಕಾರ್ಕಳ, ಅ. 02(DaijiworldNews/PY): ಮೋಹನ್ದಾಸ್ ಕರಮಚಂದ್ರ ಚಂದ ಗಾಂಧೀಜಿ ಅವರ ಜನ್ಮ ದಿನವಾದ ಅಕ್ಟೋಬರ್ 2ರಂದು ಪ್ರಧಾನಿ ಮೋದಿಯವರ ಆಶಯದಂತೆ ಕಾರ್ಕಳ ಕ್ಷೇತ್ರ ಶಾಸಕ ಹಾಗೂ ಸರಕಾರಿ ಮುಖ್ಯ ಸಚೇತಕ ವಿ ಸುನಿಲ್ ಕುಮಾರ್ ಅವರು ಆಯೋಜಿಸಿದ ಗಾಂಧೀಜಿಯ ನೆನೆಯೋಣ ಸ್ವಚ್ಛ ಕಾರ್ಕಳ ಮಾಡೋಣ ಎಂಬ ಪರಿಕಲ್ಪನೆಯೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದೆ.

ವಿವಿಧ ಸಂಘಟನೆಗಳು, ಯುವಕ ಸಂಘಗಳು, ದೇವಸ್ಥಾನದ ಆಡಳಿತ ಮಂಡಳಿಗಳು, ಆಟೋರಿಕ್ಷಾ ಚಾಲಕ ಮಾಲಕರು, ವಿದ್ಯಾಥಿಗಳು, ಗ್ರಾಮ ಪಂಚಾಯತ್ಗಳು ಸೇರಿದಂತೆ ಎಲ್ಲಾ ಸರಕಾರಿ ಕಛೇರಿಗಳು, ತಮ್ಮ ತಮ್ಮ ಮನೆ, ಕಛೇರಿ ಸುತ್ತಲಿನ ವ್ಯಾಪ್ತಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೆಳಿಗ್ಗೆ 6.30 ರಿಂದಲೇ ಸ್ವಚ್ಛತಾ ಕಾರ್ಯವನ್ನು ಮಾಡಿದ್ದರು. ತಲಾ 25 ಜನರನ್ನು ಒಳಗೊಂಡ 700 ಕ್ಕೂ ಹೆಚ್ಚು ತಂಡಗಳು ಹಾಗೂ 20,000 ಕ್ಕೂ ಅಧಿಕ ಜನರು ಅತ್ಯಂತ ಉತ್ಸಾಹದಿಂದ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಕಳೆದ 15 ದಿನಗಳ ಶಾಸಕರ ವಿಶೇಷ ಮುತುವರ್ಜಿಯಿಂದ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಾದ್ಯಂತ ವಿವಿಧ ಸಂಘ-ಸಂಸ್ಥೆಗಳನ್ನು ಒಟ್ಟು ಸೇರಿಸಿ ಪೂರ್ವಭಾವಿ ಸಭೆಗಳ ಆಯೋಜನೆ ಮಾಡುವ ಮೂಲಕ ಆಯಾ ಗ್ರಾಮ ಮಟ್ಟಗಳಲ್ಲಿ ಸಣ್ಣ ತಂಡಗಳನ್ನು ರಚನೆ ಮಾಡಲಾಗಿತ್ತು. ಎಲ್ಲಾ ತಂಡಗಳಿಗೆ ಸ್ವಚ್ಛತೆಗೆ ಬೇಕಾಗುವ ಸಲಕರಣೆಗಳನ್ನು ವ್ಯವಸ್ಥೆ ಮಾಡಲಾಗಿದ್ದು ಹಾಗೂ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸ್ವತಃ ಭಾಗಿಯಾಗುವಂತೆ ಪ್ರೇರೇಪಿಸಲಾಗಿತ್ತು. ಶಾಸಕರ ಈ ಪ್ರಯತ್ನದಿಂದಾಗಿ ನಿರೀಕ್ಷೆಗೂ ಮೀರಿ ಸಾರ್ವಜನಿಕರಿಂದ ಸ್ಪಂದನೆ ದೊರಕಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾಗಿದೆ.
ಸ್ವಚ್ಚತಾ ಅಭಿಯಾನವು ಕೇವಲ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿರದೆ ಇದೊಂದು ನಿತ್ಯೋತ್ಸವ ಆಗುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಆ ಮೂಲಕ ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳದ ಆಶಯದೊಂದಿಗೆ ಸಾರ್ವಜನಿಕರ ಸಂಪೂರ್ಣ ಸಹಭಾಗಿತ್ವದಲ್ಲಿ ಗಾಂಧೀಜಿಯ ನೆನೆಯೋಣ ಸ್ವಚ್ಛ ಕಾರ್ಕಳ ಮಾಡೋಣ ಎಂಬ ಧ್ಯೇಯವಾಕ್ಯದೊಂದಿಗೆ ಎರಡನೇ ವರ್ಷದ ಕಾರ್ಯಕ್ರಮ ಯಶಸ್ಸು ಕಂಡಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆಗೆ, ಸರಕಾರಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಹಾಗೂ ಎಲ್ಲಾ ಸಂಘ-ಸಂಸ್ಥೆಗಳ ಸಹಕಾರಕ್ಕೆ ಶಾಸಕ ವಿ.ಸುನೀಲ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.